Dr.rajkumar : ರಾಜಕುಮಾರ್, ಎನ್ ಟಿ ಆರ್, ಅಮಿತಾಭ್, ಕಮಲ್ ಹಾಸನ್ ಹಾಗೂ ಮೋಹನ್ ಲಾಲ್ ಇವರಲ್ಲಿ ಸರ್ವಶ್ರೇಷ್ಠ ನಟ ಯಾರು? ಯಾಕೆ?

ಪದ್ಮಶ್ರೀ ಎನ್.ಟಿ.ರಾಮಾರಾವ್, ಪದ್ಮಭೂಷಣ ರಾಜಕುಮಾರ್, ಪದ್ಮವಿಭೂಷಣ ಅಮಿತಾಭ್ ಬಚ್ಚನ್, ಪದ್ಮಭೂಷಣ ಕಮಲ ಹಾಸನ್, ಪದ್ಮಭೂಷಣ ಮೋಹನ್ ಲಾಲ್ ಇವರುಗಳಲ್ಲಿ ಯಾರು ಸರ್ವಶ್ರೇಷ್ಠರು ಎಂದು ಹೇಳುವುದು ನಮ್ಮಂತಹ ಅಲ್ಪರಿಗೆ ಉದ್ಧಟತನದ ಕೆಲಸ.


ಎಲ್ಲರೂ ಅವರವರ ಭಾಷೆಗಳಲ್ಲಿ - ಕ್ರಮವಾಗಿ ತೆಲುಗು, ಕನ್ನಡ, ಹಿಂದೀ, ತಮಿಳು ಮತ್ತು ಮಲಯಾಳಂ - ಮೇರುಪರ್ವತದ ಸ್ಥಾನ ಗಳಿಸಿದ್ದಾರೆ.

ರಾಜಕುಮಾರ್ ಅವರು 1995ರಲ್ಲಿ ಹಾಗೂ ಬಚ್ಚನ್ ಅವರು 2018ರಲ್ಲಿ ದಾದಾಸಾಹೇಬ್ ಫಾಲ್ಕೇ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದಾರೆ.

1967ರಲ್ಲಿ ಪ್ರಾರಂಭವಾದ ದೇಶದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಚ್ಚನ್ ನಾಲ್ಕು ಬಾರಿ, ಕಮಲ ಹಾಸನ್ ಮೂರು ಬಾರಿ ಹಾಗೂ ಮೋಹನ್ ಲಾಲ್ ಎರಡು ಬಾರಿ ಗಳಿಸಿದ್ದಾರೆ. ಈ ಪ್ರಶಸ್ತಿ ಪ್ರಾರಂಭವಾಗುವ ಮುನ್ನ ಅತ್ಯುತ್ತಮ ನಟನೆಗೆ ಎನ್ ಟಿ ಆರ್ ರವರು ಎರಡು ಬಾರಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದಿದ್ದರು.

ರಾಜಕುಮಾರ್ ಅವರು ದೇಶದ ಅತ್ಯುತ್ತಮ ಗಾಯಕ ಪ್ರಶಸ್ತಿಯಿಂದ ಒಮ್ಮೆ ಅಲಂಕೃತರಾಗಿದ್ದಾರೆ.

1949ರಲ್ಲಿ ಸಿನಿಮಾ ನಟನಾಗಿ ವೃತ್ತಿಯನ್ನು ಆರಂಭಿಸಿದ ರಾಮರಾವ್ ಅವರು ಒಟ್ಟು 300 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ರಾಜಕುಮಾರ್ ಅವರು 1954ರಿಂದ 2000ವರೆಗಿನ ಅವಧಿಯಲ್ಲಿ 208 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ 33 ಸಿನಿಮಾಗಳು ಇತರ ಏಳು ಭಾಷೆಗಳಲ್ಲಿ 55 ಬಾರಿ ರೀಮೇಕ್ ಆಗಿವೆ. ಅವರಿಗೆ ತಾವೆಷ್ಟು ಒಳ್ಳೆಯ ಗಾಯಕ ಎಂಬುದೇ ಗೊತ್ತಿರಲಿಲ್ಲವೇನೋ. ಸಿನಿಮಾ ಕ್ಷೇತ್ರಕ್ಕೆ ಬಂದು ಎಷ್ಟೋ ವರ್ಷಗಳ ನಂತರ ಹಾಡಲು ತೊಡಗಿ ಪ್ರಮುಖ ಗಾಯಕರಾಗಿ ಪ್ರಸಿದ್ಧಿ ಪಡೆದರು.

ಬಚ್ಚನ್ ಅವರು ನಾಯಕನಟನಾಗಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅತಿಥಿನಟನಾಗಿ ಅಥವಾ ನಿರೂಪಕನಾಗಿ ಸೇರಿದಂತೆ ಸುಮಾರು 240 ಚಿತ್ರಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ವಿಶಿಷ್ಟ ಧ್ವನಿ ಇಡೀ ಭಾರತದಲ್ಲಷ್ಟೇ ಅಲ್ಲದೆ ಇತರ ದೇಶಗಳಲ್ಲೂ ತುಂಬಾ ಹೆಸರು ಪಡೆದಿದೆ.

ಕಮಲಹಾಸನ್ ರವರು ಅನೇಕ ಭಾಷೆಗಳಲ್ಲಿ ಒಟ್ಟು ಸುಮಾರು 126 ಚಿತ್ರಗಳಲ್ಲಿ ಹಾಗೂ ಮೋಹನ್ ಲಾಲ್ ರವರು ಸುಮಾರು 185 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಐವರಲ್ಲಿ ರಾಜಕುಮಾರ್ ಅತ್ಯುತ್ತಮ ಗಾಯಕರಾಗಿಯೂ, ಕಮಲಹಾಸನ್ ಅತ್ಯುತ್ತಮ ನರ್ತಕರಾಗಿಯೂ, ಬಚ್ಚನ್ ಅತ್ಯುತ್ತಮ ನಿರೂಪಕರಾಗಿಯೂ, ಎನ್ ಟಿ ಆರ್ ಮುಖ್ಯಮಂತ್ರಿಯಾಗಿಯೂ ಪ್ರಸಿದ್ಧರು.

ಇಷ್ಟೆಲ್ಲಾ ಹೇಳಿದ ಮೇಲೆ ನನ್ನ ಉದ್ಧಟತನದ ತೀರ್ಪು ಹೀಗಿದೆ:

ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ ಮತ್ತು ಸಾಮಾಜಿಕ ಹೀಗೆ ಎಲ್ಲ ತರಹದ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಎನ್ ಟಿ ಆರ್ ಮತ್ತು ರಾಜಕುಮಾರ್ ರವರು ಮಾತ್ರ ನಟಿಸಿದ್ದಾರೆ. ಬಚ್ಚನ್, ಕಮಲಹಾಸನ್ ಮತ್ತು ಮೋಹನ್ ಲಾಲ್ ಕೇವಲ ಸಾಮಾಜಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜಕುಮಾರ್ ರವರು ಶಾಸ್ತ್ರೀಯ ಸಂಗೀತ ಕಲಿತವರಾಗಿದ್ದು ಎಲ್ಲ ತರಹದ ಹಾಡುಗಳನ್ನು ತಮಗಾಗಿ ಅಲ್ಲದೆ ಇತರರಿಗಾಗಿಯೂ ಹಾಡಿದ್ದಾರೆ.

ರಾಜಕುಮಾರ್ ಎಂದರೆ ಕರ್ನಾಟಕದಲ್ಲಿ ಪಂಡಿತರು ಪಾಮರರು ಎಲ್ಲರಿಗೂ ಕನ್ನಡ ಭಾಷೆಯ ಅದ್ವಿತೀಯ ಪ್ರತಿನಿಧಿಯಾಗಿ ಮೆರೆದವರು. ಅವರ ನಂತರ ಅವರಷ್ಟು ಸಜ್ಜನ, ಪ್ರತಿಭಾಶಾಲಿ, ಮಾದರಿ ಹೀರೋ ಯಾರೂ ಹುಟ್ಟಿಲ್ಲ.

ಈ ಕಾರಣಕ್ಕಾಗಿ ಪ್ರಶ್ನೆಗೆ ಉತ್ತರ: ರಾಜಕುಮಾರ್.

ರಾಜಕುಮಾರ್ ಅವರಿಗೆ ಈ ಪ್ರಶ್ನೆ ಕೇಳಿದ್ದರೆ ಅವರು ನಿಗರ್ವಿಯಾಗಿ ಮಿಕ್ಕ ಎಲ್ಲರ ಹೆಸರನ್ನೂ ಹೇಳಿಬಿಡುತ್ತಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">