Viral : ಕೋಳಿ ಆಸೆಗೆ ಚಿರತೆ ಬೋನಿಗೆ ಬಿದ್ದ ಭೂಪ, ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ವೈರಲ್!

ಚಿರತೆ ಕಾಟ ಹೆಚ್ಚಾದ ಕಾರಣ ಅರಣ್ಯಾಧಿಕಾರಿಗಳು ಬೋನು ಇಟ್ಟಿದ್ದಾರೆ. ಈ ಬೋನಿನಲ್ಲಿ ಕೋಳಿಯೊಂದನ್ನು ಬಿಟ್ಟಿದ್ದಾರೆ. ಬಿಟ್ಟಿ ಕೋಳಿ ಇದೆ ಎಂದು ಕದಿಯಲು ಮುಂದಾಗ ವ್ಯಕ್ತಿ ಚಿರತೆ ಬೋನಿನಲ್ಲಿ ಬಿದ್ದು ಲಾಕ್ ಆದ ಘಟನೆ ನಡೆದಿದೆ.

ಬುಲಂದ್‌ಶಹರ್(ಫೆ.24): ಅರಣ್ಯದಂಚಿನ ಗ್ರಾಮ. ಕಳೆದ ಹಲವು ದಿನಗಳಿಂದ ಚಿರತೆ ಕಾಟ. ಹೀಗಾಗಿ ಗ್ರಾಮಸ್ಥರು ಭಯದಿಂದಲೇ ಓಡಾಡುವ ಪರಿಸ್ಥಿತಿ ಎದುರಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಅಧಿಕಾರಿಗಳು ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ದೊಡ್ಡದಾದ ಬೋನು ತಂದು ಚಿರತೆ ಓಡಾಡುತ್ತಿರುವ ದಾರಿಯಲ್ಲಿ ಇಟ್ಟಿದ್ದಾರೆ. ಈ ಬೋನಿನೊಳಗೆ ದೊಡ್ಡ ಗಾತ್ರದ ಕೋಳಿಯೊಂದನ್ನು ಬಿಟ್ಟಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಮರಳಿದ್ದಾರೆ. ಇದೇ ಗ್ರಾಮದ ವ್ಯಕ್ತಿ, ಚಿರತೆ ಹಿಡಿಯಲು ಬೋನಿನೊಳಗೆ ಇಟ್ಟಿದ್ದ ಕೋಳಿ ಮೇಲೆ ಆಸೆಯಾಗಿದೆ. ಬಿಟ್ಟಿ ಕೋಳಿ ಇದೆ. ಮಸಾಲೆ ಅರೆದು ಪಾರ್ಟಿ ಮಾಡುವ ಮನಸ್ಸಾಗಿದೆ. ಹೀಗಾಗಿ ಮೆಲ್ಲನೇ ಬೋನಿನ ಒಳಗೆ ಹೋಗಿ ಕೋಳಿ ಕದಿಯಲು ಮುಂದಾಗಿದ್ದಾನೆ. ಆದರೆ ಈ ವ್ಯಕ್ತಿ ಬೋನಿನ ಒಳಗೆ ಹೋಗುತ್ತಿದ್ದಂತ ಚಿರತೆ ಬೋನಿನ ಬಾಗಿಲು ಮುಚ್ಚಿದೆ. ಇದರ ಪರಿಣಾಮ ಈತ ಚಿರತೆ ಬೋನಿನಲ್ಲಿ ಲಾಕ್ ಆದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.ಇದೀಗ ಈ ವಿಡಿಯೋ ವೈರಲ್ ಆಗಿದೆ.

ಬುಲಂದ್‌ಶಹರ್‌ನ ಅರಣ್ಯದಂಚಿನ ಗ್ರಾಮದಲ್ಲಿ ಚಿರತೆ ದಾಳಿಗೆ ಜನ ಕಂಗಾಲಾಗಿದ್ದರು. ದೇಶದ ಅರಣ್ಯದಂಚಿನ ಬಹುತೇಕ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಹೀಗಾಗಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇತ್ತ ದೊಡ್ಡ ಚಿರತೆ ಬೋನು ತಂದ ಅರಣ್ಯಾಧಿಕಾರಿಗಳು ಅರಣ್ಯದಿಂದ ಗ್ರಾಮಕ್ಕೆ ಚಿರತೆ ಒಡಾಡುತ್ತಿದ್ದ ದಾರಿ ಮಧ್ಯೆ ಇಟ್ಟಿದ್ದಾರೆ. ಈ ಬೋನಿನೊಳಗೆ ದೊಡ್ಡ ಗಾತ್ರದ ನಾಟಿ ಕೋಳಿಯನ್ನು ಬಿಟ್ಟಿದ್ದಾರೆ. ಈ ಕೋಳಿಗೆ ಆಹಾರ ಹಾಗೂ ನೀರು ಹಾಕಿಟ್ಟಿದ್ದಾರೆ. 

ಬೋನು ಇಟ್ಟ ದಿನವೇ ಚಿರತೆ ಬೋನಿಗೆ ಬೀಳುವ ಸಂಭವ ಕಡಿಮೆ. ಹೀಗಾಗಿ ಅರಣ್ಯಾಧಿಕಾರಿಗಳು ಬೋನು ಇಟ್ಟು ಮರಳಿದ್ದಾರೆ. ಇತ್ತ ಗ್ರಾಮಸ್ಥರು ಬೋನಿನೊಳಗೆ ಚಿರತೆ ಬಿದ್ದರೆ ಸಾಕು ಎಂದು ಪ್ರಾರ್ಥಿಸಿದ್ದಾರೆ. ಆದರೆ ಅರಣ್ಯಾಧಿಕಾರಿಗಳು ಮರಳಿದ ಬಳಿಕ, ಸ್ಥಳೀಯರು ಬೋನಿನ ಹತ್ತಿರದಿಂದ ತಮ್ಮ ತಮ್ಮ ಮನೆಗೆ ಮರಳಿದ್ದಾರೆ. ಇದೇ ವೇಳೆ ಬೋನು ನೋಡಲು ಬಂದ ಅದೇ ಗ್ರಾಮದ ವ್ಯಕ್ತಿಗೆ ದೊಡ್ಡ ಗಾತ್ರದ ಹುಂಜದ ಮೇಲೆ ಆಸೆಯಾಗಿದೆ. ಬೋನಿನ ಒಳ ಹೊಕ್ಕು, ಲಾಕ್ ಮಾಡಿದ ಕೋಳಿಯನ್ನು ತೆಗೆದುಕೊಂಡು ಬಂದರೆ ಇಂದು ನಾಳೆ ಪಾರ್ಟಿ ಎಂದು ಮನಸ್ಸಲ್ಲೇ ಅಂದುಕೊಂಡಿದ್ದಾನೆ.

ಇದೇ ಪ್ರಕಾರ ಅತ್ತ ಇತ್ತ ನೋಡಿ ಮೆಲ್ಲನೆ ಚಿರತೆ ಬೋನಿನೊಳಗೆ ಬಿಟ್ಟಿದ್ದ ಹುಂಜವನ್ನು ಕದಿಯಲು ಮುಂದಾಗಿದ್ದಾನೆ. ಬಗ್ಗಿ ಚಿರತೆ ಬೋನು ಪ್ರವೇಶಿಸಿದ ವ್ಯಕ್ತಿ ಒಳಹೋಗುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ಬೋನಿನ ಬಾಗಿಲು ಮುಚ್ಚಿಕೊಂಡಿದೆ. ಬಾಗಿಲು ಲಾಕ್ ಆಗಿದೆ. ಅದೇನೇ ಮಾಡಿದರೂ ಬಾಗಿಲು ಮಾತ್ರ ತೆರೆಯಲು ಸಾಧ್ಯವಾಗಿಲ್ಲ. ಕೆಲ ಗಂಟೆಗಳ ಕಾಲ ಬೋನಿನ ಬಾಗಿಲು ತೆರಯಲು ಪ್ರಯತ್ನ ಮಾಡಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಸಹಾಯಕ್ಕಾಗಿ ಕೂಗಿದ್ದಾನೆ. ಆದರೆ ಈನತ ಕೂಗು ತಕ್ಷಣಕ್ಕೆ ಯಾರಿಗೂ ಕೇಳಿಸಿಲ್ಲ. ಕಾರಣ ಬೋನು ಇಟ್ಟ ಪ್ರದೇಶದಿಂದ ಕೆಲ ದೂರದಲ್ಲಿ ಮನೆಗಳಿದ್ದ ಕಾರಣ ಈತನ ನೆರವಿನ ಬೇಡಿಕೆ ಯಾರಿಗೂ ಕೇಳಿಸಿಲ್ಲ. 

ಇದೇ ಬೋನಿನ ಸಮೀಪಕ್ಕೆ ಬಂದ ಸ್ಥಳೀಯನೊಬ್ಬನಿಗೆ ಸಹಾಯಕ್ಕಾಗಿ ಅಂಗಲಾಚುತ್ತಿರುವ ಕೂಗು ಕೇಳಿಸಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿ ಎಲ್ಲರೂ ಬೋನಿನ ಹತ್ತಿರಕ್ಕೆ ಬಂದಿದ್ದಾರೆ. ಈ ವೇಳೆ ಚಿರತೆ ಬದಲು ವ್ಯಕ್ತಿಯೊಬ್ಬ ಬೋನಿನೊಳಗೆ ಬಿದ್ದಿದ್ದಾನೆ. ಈ ದೃಶ್ಯ ನೋಡಿದ ಸ್ಥಳೀಯರಿಗೆ ನಗು ತಡೆಯಲು ಸಾಧ್ಯವಾಗಿಲ್ಲ. ತಕ್ಷಣವೇ ವಿಡಿಯೋ ಮಾಡಿದ್ದಾರೆ. ನಿನ್ನ ಹೆಸರೇನು? ಬೋನಿನೊಳಗೆ ಹೇಗೆ ಬಿದ್ದೆ ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ಉತ್ತರ ಹೇಳುತ್ತಾ ವ್ಯಕ್ತಿ ಸುಸ್ತಾಗಿದ್ದಾನೆ. ಕೊನೆಗೆ ಅಳುತ್ತಲೇ ತನ್ನ ಹೆಸರು ಹೇಳಿದ್ದಾನೆ. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಬೋನಿನ ಬಾಗಿಲು ತೆರೆದು ವ್ಯಕ್ತಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈತ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ವೈರಲ್ ಆಗಿದೆ. 

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">