ದೇಶದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಮೌಲ್ಯಮಾಪನ ಆಧಾರಿತ ವಿಧಾನವನ್ನು ಅನುಸರಿಸಲು ಕೇಂದ್ರ ಸರ್ಕಾರವು ಆರು ರಾಜ್ಯಗಳಿಗೆ ಹೇಳಿದೆ.
ಮುಖ್ಯವಾಗಿ ಈ ಆರು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಸ್ಥಳೀಯವಾಗಿ ಸೋಂಕಿನ ಹರಡುವಿಕೆಯನ್ನು ಸೂಚಿಸುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ರಾಜ್ಯಗಳಿಗೆ ಕೋವಿಡ್-19 ರ ಪರಿಸ್ಥಿತಿಯನ್ನು ಸೂಕ್ಷ್ಮ ಮಟ್ಟದಲ್ಲಿ ಪರೀಕ್ಷಿಸಲು ಮತ್ತು ರೋಗದ ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಅಗತ್ಯ ಕ್ರಮಗಳ ಅನುಷ್ಠಾನದ ಮೇಲೆ ಗಮನಹರಿಸುವಂತೆ ಪತ್ರದಲ್ಲಿ ಸಲಹೆ ನೀಡಿದ್ದಾರೆ.
ಹೊಸ ಕೊವಿಡ್-19 ಪ್ರಕರಣಗಳ ಹೊಸ ಕ್ಲಸ್ಟರ್‌ಗಳು, ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ಐಎಲ್‌ಐ) ಮತ್ತು ತೀವ್ರತರವಾದ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಪ್ರಕರಣಗಳನ್ನು ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಅಥವಾ ಮೀಸಲಾದ ಫೀವರ್ ಕ್ಲಿನಿಕ್ ಮೂಲಕ ಮುಂಚಿನ ಎಚ್ಚರಿಕೆಯ ಸಂಕೇತಗಳನ್ನು ಪತ್ತೆಹಚ್ಚಲು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಭೂಷಣ್ ಹೇಳಿದ್ದಾರೆ.
ಅದೇ ರೀತಿ ಅಂತಾರಾಷ್ಟ್ರೀಯ ಪ್ರಯಾಣಿಕರ ನಿಗದಿತ ಮಾದರಿಗಳಿಗೆ ಜೀನೋಮಿಕ್ ಸೀಕ್ವೆನ್ಸಿಂಗ್, ಸೆಂಟಿನೆಲ್ ಸೈಟ್‌ಗಳಿಂದ ಮಾದರಿಗಳ ಸಂಗ್ರಹ (ಗುರುತಿಸಲಾದ ಆರೋಗ್ಯ ಸೌಲಭ್ಯಗಳು), ಮತ್ತು ಪ್ರಕರಣಗಳ ಸ್ಥಳೀಯ ಕ್ಲಸ್ಟರ್‌ಗಳು, ಎಲ್ಲಾ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಹೆಚ್ಚಿಸಲು ಪೂರ್ವಭಾವಿ ಪ್ರಚಾರ ಮತ್ತು ವಿಶೇಷವಾಗಿ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಅವರು ಹೇಳಿದ್ದಾರೆ. ಈ ಮೂಲಕ ಈ ರಾಜ್ಯಗಳು ಕಟ್ಟುನಿಟ್ಟಾದ ನಿಗಾ ವಹಿಸುವುದು ಮತ್ತು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಕಾಳಜಿಯ ಯಾವುದೇ ಕ್ಷೇತ್ರಗಳಲ್ಲಿ ಅಗತ್ಯವಿದ್ದಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ವರದಿ : ಬಸವರಾಜ ಕಬಡ್ಡಿ