ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲಿ ಇವರೇ ಟಿಪ್ಪು ಕೊಂದವರು ಎಂದು ಬಿಜೆಪಿ ನಾಯಕರು ಉರಿಗೌಡ ದೊಡ್ಡ ನಂಜೇಗೌಡ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಬಳಿಕ ಈ ಹೆಸರು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಸಾಧ್ಯವಾದ ರೀತಿಯಲ್ಲೆಲ್ಲಾ ಟೀಕಾ ಪ್ರಹಾರ ನಡೆಸುತ್ತಿದೆ. ಮುಂದುವರಿದ ಟೀಕೆಯಂತೆ, ಸಿದ್ದರಾಮಯ್ಯ ಬೆಂಬಲಿಗರು ಉರಿಗೌಡ ನಂಜೇಗೌಡ ಹೆಸರಿನ ಆಧಾರ್ ಕಾರ್ಡ್ ಬಿಡುಗಡೆ ಮಾಡಿದ್ದು, ಇವರಿಬ್ಬರ ತಂದೆ ಸಿಟಿ ರವಿ (ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ) ಮತ್ತು ತಾಯಿಯನ್ನಾಗಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಡಿ ವ್ಯಂಗ್ಯ ಮಾಡಲಾಗಿದೆ.
ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮೋರು ತಂಡ ಉರಿಗೌಡ ನಂಜೇಗೌಡ ಹೆಸರಿನ ಆಧಾರ್ ಕಾರ್ಡ್ ಬಿಡುಗಡೆ ಮಾಡಿದ್ದು, ಅನೇಕ ಸಂಶೋಧನೆ ಬಳಿಕ ಉರಿಗೌಡ ನಂಜೇಗೌಡರ ಆಧಾರ್ ಕಾರ್ಡ್ ಸಿಕ್ಕಿದೆ ಎಂದು ಟೈಟಲ್ ನೀಡಿದ್ದಾರೆ. ನಂಜೇಗೌಡ ಆಧಾರ್ ಕಾರ್ಡ್ನಲ್ಲಿ ತಾಯಿ: ಅಶ್ವತ್ಥ ನಾರಾಯಣ, ತಂದೆ: ಸಿಟಿ ರವಿ, ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ, ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರ ಮತ್ತು ಆಧಾರ್ ಸಂಖ್ಯೆ: 420 420 420 420 ಎಂದು ಬರೆಯಲಾಗಿದೆ. ಅದೇ ರೀತಿ ಉರಿಗೌಡ ಹೆಸರಿನ ಆಧಾರ್ ಕಾರ್ಡ್ನಲ್ಲೂ ಸಿಟಿ ರವಿ, ಅಶ್ವತ್ಥ ನಾರಾಯಣ ಅವರನ್ನೇ ತಂದೆ-ತಾಯಿ ಎಂದು ಉಲ್ಲೇಖಿಸಲಾಗಿದ್ದು, ಇಬ್ಬರ ಹೆಸರಿನ ಆಧಾರ್ ಕಾರ್ಡ್ ನಂಬರ್ ಒಂದೇ ಆಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದರೆ, ಇನ್ನೊಂದು ಕಡೆ ರಾಜ್ಯ ರಾಜಕಾರಣದಲ್ಲಿ ಉರಿಗೌಡ, ನಂಜೇಗೌಡ ವಿಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ರಾಜಕೀಯ ನಾಯಕರು ವಾದ ಪ್ರತಿವಾದಗಳು ಮಾಡುತ್ತಿದ್ದಾರೆ. .ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದು ಮಂಡ್ಯ ಜಿಲ್ಲೆಯ ಉರಿಗೌಡ ಮತ್ತು ನಂಜೇಗೌಡ ಎಂದು ಬಿಜೆಪಿಯ ಕೆಲ ನಾಯಕರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಆದರೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರೇ ಮೊದಲು ಈ ಉರಿಗೌಡ ಮತ್ತು ನಂಜೇಗೌಡ ಹೆಸರುಗಳನ್ನು ತೇಲಿಬಿಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬಿಜೆಪಿ ಮೂಲ ನಾಯಕರು ಉರಿಗೌಡ, ನಂಜೇಗೌಡರ ಚರಿತ್ರೆ ನಿಜ ಎಂದು ಪ್ರತಿಪಾದಿಸಿದರೆ ಕಾಂಗ್ರೆಸ್ನಿಂದ ಬಿಜೆಪಿ ಸೇರಿದ್ದ ಸಚಿವ ಸುಧಾಕರ್, ಉರಿಗೌಡ, ನಂಜೇಗೌಡ ಗೊತ್ತಿಲ್ಲ, ದೇವೇಗೌಡ, ರಂಗೇಗೌಡ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ. ಆಶ್ವಥ್ ನಾರಾಯಣ್, ಸಿ.ಟಿ.ರವಿ ಬಿಜೆಪಿಗೆ ಅವಮಾನ ಮಾಡಲು ಹೊರಟ್ಟಿದ್ಧಾರೆ. ಇವರು ಸುಳ್ಳನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ ಎಂದು ಈ ಹಿಂದೆ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿದ್ದರು.