ಇದೇ ವೇಳೆ ಮೈನಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಚಿತ್ತಾಪುರ ಹಾಗೂ ಹೊಳೆಬಸಯ್ಯ ಮತ್ತು ಅವರ ತಂಡ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶಾಲಾ ಅವಧಿ ನಂತರ ಸಂಜೆ 6 ಗಂಟೆಯಿಂದ 9 ವರೆಗೆ ಹಾಗೂ ಬೆಳಿಗ್ಗೆ 6 ಗಂಟೆಯಿಂದ 9 ವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನು ಮಾಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಹಾಗೂ ಸರಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಪ್ರಾಥಮಿಕ ಹಂತದಿಂದಲೇ ಸಿದ್ಧಗೊಳಿಸಿ ಅವರ ಮುಂದಿನ ಉಜ್ವಲ ಭವಿಷ್ಯತ್ತನ್ನು ಕಟ್ಟಿಕೊಡುವ ಶ್ರೇಷ್ಠ ಕೆಲಸಕ್ಕೆ ಸರಕಾರಿ ಶಾಲಾ ಶಿಕ್ಷಕರು ಹೆಜ್ಜೆ ಇಟ್ಟಿರುವುದು ಇಲಾಖೆಗೆ ಒಂದು ಹೆಮ್ಮೆಯ ವಿಷಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರನ್ನು ಅಭಿನಂದಿಸಿದರು. ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ತರಗತಿಗಳಿಗೆ ಅಕ್ಕಪಕ್ಕದ ಗ್ರಾಮದ ಸರಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಜರಾಗುತ್ತಿರುವುದು ವಿಶೇಷವಾಗಿದೆ. ಮೈನಳ್ಳಿ ಗ್ರಾಮದವರಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅವರು ಸರಕಾರಿ ಶಾಲಾ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ತಮ್ಮ ಸ್ವಂತ ಸುಸಜ್ಜಿತವಾದ ಮನೆಯನ್ನೇ ಬಿಟ್ಟು ಕೊಟ್ಟಿರುವುದು, ಮಕ್ಕಳ ಶಿಕ್ಷಣದ ಕಾಳಜಿ ಹಾಗೂ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಅವರ ಕೊಡುಗೆಯ ನಿದರ್ಶನವಾಗಿದೆ. ಮೈನಹಳ್ಳಿ ಶಾಲೆಯಲ್ಲಿ ಪ್ರತಿ ವರ್ಷ 10-15 ಎಂಟನೇ ತರಗತಿಯ ವಿದ್ಯಾರ್ಥಿಗಳು ಇಲಾಖೆ ನಡೆಸುವ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ್.ಟಿ, ವಲಯದ ಬಿಆರ್ಪಿ ಚಂದ್ರಶೇಖರ ಹೇಳವರ, ಸಿಆರ್‌ಪಿ ಬಸವರಾಜ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
Tags
ಟಾಪ್ ನ್ಯೂಸ್