ಮಹಿಳಾ ಗ್ರಾಮಲೆಕ್ಕಾಧಿಕಾರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.
ತಿಂಗಳ ಹಿಂದಷ್ಟೆ ಹನೂರಿನ ಫಾರೆಸ್ಟ್ ಗಾರ್ಡ್ ವಿವಾಹವಾಗಿದ್ದ ಕೃಷ್ಣಾಬಾಯಿ ನೇಣಿಗೆ ಶರಣು.
ಹುಣಸೂರು :
ನವ ವಿವಾಹಿತ ಮಹಿಳಾ ಗ್ರಾಮಲೆಕ್ಕಿಗರೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯ ಶ್ಯಾನುಬೋಗನಹಳ್ಳಿ ವಲಯದ ಗ್ರಾಮಲೆಕ್ಕಾಧಿಕಾರಿ ಕೃಷ್ಣಾಬಾಯಿ ತುಕಾರಾಂ ಪಡ್ಕೆ(೨೫) ಮೃತರು.
ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎಸ್‌ಗಳ್ಳಿ ಗ್ರಾಮದವರಾಗಿದ್ದು, ತಿಂಗಳ ಹಿಂದಷ್ಟೆ ಹನೂರಿನ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್, ಬೆಳಗಾಂನ ಸುಬಾಸ್ ಬೋಸ್ಲೆಯವರನ್ನು ವಿವಾಹವಾಗಿದ್ದು, ನಾಲ್ಕು ದಿನಗಳ ಹಿಂದಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಬಿಳಿಕೆರೆಯ ಎಸ್.ಬಿ.ಐ.ಹಿಂಬಾಗದ ಬಾಡಿಗೆ ಮನೆಯಲ್ಲಿ ಸಹೋದ್ಯೋಗಿ ಗ್ರಾಮಲೆಕ್ಕಾಧಿಕಾರಿ ಚೈತ್ರ ಮತ್ತು ಅವರ ತಾಯಿಯೊಂದಿಗೆ ಜೊತೆಯಲ್ಲೇ ವಾಸವಿದ್ದರು.
ಆಗಿರೋದಿಷ್ಟು: ಶನಿವಾರ ಚೈತ್ರ ಮತ್ತವರ ತಾಯಿ ಮನೆಯಲ್ಲೇ ಇದ್ದರು. ಕೃಷ್ಣಾಬಾಯಿ ತುಕಾರಾಂ ಫಡ್ಕೆಯವರು ಬೆಳಗ್ಗೆಯಿಂದಲೇ ಯಾರೊಂದಿಗೋ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ನಂತರ ಕೊಠಡಿ ಚಿಲಕ ಹಾಕಿಕೊಂಡಿದ್ದರು. ಅನೇಕ ಬಾರಿ ಕೂಗಿದರೂ ಬಾಗಿಲು ತೆಗೆಯಲಿಲ್ಲ. ಏನೋ ಅನಾಹುತ ಆಗಿರಬೇಕೆಂದು ಅಕ್ಕಪಕ್ಕದವರ ನೆರವಿನಿಂದ ಬಾಗಿಲು ಒಡೆದು ನೋಡಲಾಗಿ. ಕಿಟಕಿಯ ಸರಳಿಗೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣವೇ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ತಹಸೀಲ್ದಾರ್ ಡಾ.ಅಶೋಕರ ಸಮ್ಮುಖದಲ್ಲಿ ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಬಿಳಿಕೆರೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತಿ ಸುಭಾಷ್ ಬೋಸ್ಲೆ ಹಾಗೂ ಅಥಣಿಯಿಂದ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ನಂತರವಷ್ಟೆ ನಿಖರ ಕಾರಣ ತಿಳಿದು ಬರಲಿದೆ ಎಂದು ತಹಸೀಲ್ದಾರ್ ಡಾ.ಅಶೋಕ್ ಹಾಗೂ ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಿಳಿಕೆರೆ ನಾಡ ಕಚೇರಿ ಉಪತಹಸೀಲ್ದಾರ್ ಅರುಣ್ ಸಾಗರ್ ಹಾಗೂ ಸಹೋದ್ಯೋಗಿಗಳು ಭೇಟಿ ಇತ್ತು. ಕಂಬನಿ ಮಿಡಿದರು.
Tags
ಟಾಪ್ ನ್ಯೂಸ್