ವಿಶ್ವ ಗಿನ್ನಿಸ್ ದಾಖಲೆಗೆ ಸೇರಿದ ಶ್ರೀ ಸಿದ್ಧಾರೂಢ ಸ್ವಾಮೀಜಿ ನೈರುತ್ಯ ರೈಲ್ವೆ ನಿಲ್ದಾಣದ ವಿಶ್ವದ ಅತಿ ಉದ್ದನೇ ಪ್ಲಾಟ್ ಫಾರ್ಮ್.
ಹುಬ್ಬಳ್ಳಿ:
ಶ್ರೀ ಸಿದ್ಧಾರೂಢ ಸ್ವಾಮೀಜಿ ನೈರುತ್ಯ ರೈಲ್ವೆ ನಿಲ್ದಾಣದ ವಿಶ್ವದ ಅತಿ ಉದ್ದನೇ ಪ್ಲಾಟ್ ಫಾರ್ಮ್ ವಿಶ್ವ ಗಿನ್ನಿಸ್ ದಾಖಲೆಯಾಗಿದ್ದು, ಇದರಿಂದ ವಾಣಿಜ್ಯನಗರಿಯ ಹುಬ್ಬಳ್ಳಿಯ ಗರಿಮೆ ಮತ್ತಷ್ಟು ಇಮ್ಮಡಿಗೊಂಡಿದೆ.
ಸ್ವತಃ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷವ್ ಈ ಖುಷಿಯ ವಿಚಾರದ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಮೂರು ದಿನದ ಹಿಂದೆ( ಮಾ. 12 ರಂದು ಪ್ರಧಾನಿ ನರೇಂದ್ರ ಮೋದಿಯವರು) ಧಾರವಾಡದ ಐಐಟಿ ಉದ್ಘಾಟನೆ ವೇಳೆ ವರ್ಚುವಲ್ ಮೂಲಕ ವಿಶ್ವದ ಅತಿ ಉದ್ದನೇಯ ಪ್ಲಾಟ್ ಫಾರ್ಮ್ ಅನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದರು.
ರೈಲ್ವೆ ನಿಲ್ದಾಣದಲ್ಲಿ 20.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಒಂದನೇ ಪ್ಲಾಟ್‌ಫಾರ್ಮ್ 1,507 ಮೀಟರ್ ಉದ್ದವಿದೆ. ಈ ಪ್ಲಾಟ್‌ಫಾರ್ಮ್‌ನ ಉದ್ದ ಮೊದಲು 550 ಮೀಟರ್ ಇತ್ತು. ಗೋರಖ್‌ಪುರದಲ್ಲಿದ್ದ 1,366 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಎನ್ನುವ ಕೀರ್ತಿ ಹೊಂದಿತ್ತು. ಈಗ ಈ ಹೆಗ್ಗಳಿಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾಲಾಗಿದೆ. 2019ರ ನವೆಂಬರ್‌ನಲ್ಲಿ ಪ್ಲಾಟ್‌ಫಾರ್ಮ್ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೆಲ ತಿಂಗಳ ನಂತರ ಅದರ ಉದ್ದವನ್ನು 1,400 ಮೀಟರ್‌ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿತ್ತು. ಬಳಿಕ ಇನ್ನಷ್ಟು ವಿಸ್ತರಿಸಲು ನಿರ್ಧರಿಸಲಾಯಿತು. ಮುಖ್ಯ ಎಂಜಿನಿಯರ್ ಜೊತೆ ಏಳು ಮಂದಿ ಎಂಜಿನಿಯರ್‌ಗಳು ಒಳಗೊಂಡ ತಂಡ ರಚಿಸಲಾಗಿತ್ತು. 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿದ್ದಾರೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಕಾರಿ ತಿಳಿಸಿದ್ದಾರೆ.
ವರದಿ : ಬಸವರಾಜ ಕಬಡ್ಡಿ