ಕೊಪ್ಪಳ,: ಇಡೀ ವಿಶ್ವದಲ್ಲಿಯೇ ಖ್ಯಾತಿ ಹೊಂದಿರುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಕೊಪ್ಪಳ ಜಿಲ್ಲೆಯ ಮುಂಡರಗಿಯ ಭೀಮರಾಯ, ಹಮ್ಮಿಗಿ ಕೆಂಚನಗೌಡ ಮತ್ತು ಅನೇಕ ವೀರರು ಹುತಾತ್ಮರಾದ ಸ್ಮರಣೆಗಾಗಿ ಸ್ಥಾಪಿಸಲಾದ ಐತಿಹಾಸಿಕ ಅಶೋಕ ಸ್ತಂಭದ ವಿಶೇಷತೆಯ ಅಶೋಕ ವೃತ್ತ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿತು.
ಅಶೋಕನ ಕಾಲದಲ್ಲಿ ಕೊಪ್ಪಳವು ಜೈನ ಧರ್ಮಿಯರ ಪ್ರಮುಖ ಕೇಂದ್ರವಾಗಿ ಜೈನ ಕಾಶಿ ಎಂದೇ ಹೆಸರಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪಿನಲ್ಲಿ 15 ಆಗಸ್ಟ್ 1957 ರಂದು ಕೊಪ್ಪಳ ನಗರದಲ್ಲಿ ಅಶೋಕ ಸ್ತಂಭವನ್ನು ಸ್ಥಾಪನೆ ಮಾಡಿರುವುದು ಸಹ ಕೊಪ್ಪಳದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಶೋಕನ ಶಿಲಾಶಾಸನ ಮತ್ತು ಅಶೋಕ ಸ್ತಂಭದಿಂದಲು ಸಹ ಕೊಪ್ಪಳದ ಹೆಸರು ಜಗದಗಲ ಹಬ್ಬಿರುವುದು ವಿಶೇಷತೆಯಾಗಿದೆ. ಅದರಂತೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಪ್ರಸಿದ್ಧ ಅಶೋಕ ಸ್ತಂಭವಿರುವ ವೃತ್ತ ನಿರ್ಮಾಣ ಕಾಮಗಾರಿಗೆ ಕೊಪ್ಪಳ ನಗರದಲ್ಲಿ ಚಾಲನೆ ನೀಡಿರುವುದು ನಮ್ಮ ಭಾಗ್ಯವಾಗಿದೆ ಎಂದು ಇದೇ ವೇಳೆ ಸಚಿವರ ಹಾಲಪ್ಪ ಆಚಾರ, ಸಂಸದ ಸಂಗಣ್ಣ ಕರಡಿ,ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಪ್ರತಿಕ್ರಿಯಿಸಿದರು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್ ಮಾತನಾಡಿ,ಈ ಐತಿಹಾಸಿಕ ವೃತ್ತವನ್ನು ನಗರಸಭೆಯ ನಿಧಿ 24 ಲಕ್ಷ ರೂ. ಹಾಗೂ 15ನೇ ಹಣಕಾಸಿನ ಉಳಿತಾಯ ಅನುದಾನ 16 ಲಕ್ಷ ರೂ. ಅನುದಾನ ಸೇರಿ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ವಿನೂತನ ವೃತ್ತ : ಭಾರತದ ಇತಿಹಾಸದಲ್ಲಿ ಶೌರ್ಯ ಸಾಹಸಕ್ಕೆ ಹೆಸರಾಗಿದ್ದ ಅಶೋಕನ ಸ್ತಂಭಗಳು ಭಾರತೀಯ ಉಪ ಖಂಡದಾದ್ಯಂಥ ಹರಡಿದ್ದು ಇವು ಏಕಶಿಲೆಯಲ್ಲಿರುವುದು ವಿಶೇಷ. ನಾಲ್ಕು ಸಿಂಹಗಳನ್ನು ಹೊಂದಿರುವ ಈ ಸ್ತಂಭವನ್ನು ಅಶೋಕನು ಧರ್ಮ ಚಕ್ರ ಎಂದೇ ಉಲ್ಲೇಖಿಸಿದ್ದಾನೆ. ಭಾರತದ ರಾಷ್ಟೀಯ ಲಾಂಛನವಾದ ಅಶೋಕ ಸ್ತಂಭವಿರುವ ವೃತ್ತವು ಕೊಪ್ಪಳ ನಗರದಲ್ಲಿ ವಿನೂತನವಾಗಿ ನಿರ್ಮಾಣವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ನಗರಸಭೆಯ ಪೌರಾಯುಕ್ತ ಹೆಚ್.ಎನ್.ಭಜ್ಜಕ್ಕನವರ್, ತಹಸೀಲ್ದಾರ ಅಮರೇಶ ಬಿರಾದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದ ಹೊಸಮನಿ, ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಅಮ್ಜದ್ ಪಟೇಲ್,ಅಕ್ಬರ ಪಾ಼ಷಾ, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ವಿದ್ಯಾ ಹೆಸರೂರ, ಉಮಾ ಪಾಟೀಲ, ಮಹೇಂದ್ರ ಚೋಪ್ರಾ, ಅಭಿಯಂತರರಾದ ಮಧುರಾ ಮುಗದೂರ, ಸೋಮಲಿಂಗಪ್ಪ ಸೇರಿದಂತೆ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಮಹಾಂತೇಶ ಕೊತಬಾಳ, ಬಸವರಾಜ ಶಿಲವಂತರ, ರಾಚಪ್ಪ ಹಡಪದ ಹಾಗೂ ಇನ್ನು ಅನೇಕ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು, ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇನ್ನೀತರರು ಭಾಗಿಯಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವರದಿ : ಈರಯ್ಯ ಕುರ್ತಕೋಟಿ