ಕೊಪ್ಪಳ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅಣಕು ಮತದಾನ
ಕೊಪ್ಪಳ,: ಪ್ರತಿಯೊಬ್ಬ ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ ಹೇಳಿದರು.
ಶನಿವಾರ ತಾಲೂಕಿನ ಟಣಕನಲ್ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಣುಕು ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 18 ವರ್ಷ ಮೇಲ್ವಟ್ಟ ಪ್ರತಿಯೊಬ್ಬರೂ ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಬೇಕು. ಆ ಮೂಲಕ ತಮಗೆ ಸಂವಿಧಾನಾತ್ಮಕವಾಗಿ ದೊರೆತಿರುವ ಹಕ್ಕನ್ನು ಚಲಾಯಿಸುವಂತೆ ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಇನ್ನು ಯಾರು ಗುರುತಿನ ಚೀಟಿ ಮಾಡಿಸಿಕೊಂಡಿಲ್ಲ. ಅವರೆಲ್ಲಾ ಗುರುತಿನ ಚೀಟಿಯನ್ನು ಮಾಡಿಸಿಕೊಳ್ಳಬೇಕು. ಜೊತೆಗೆ ಈ ಮತದಾನ ಪ್ರಾತ್ಯಕ್ಷಿಕೆಯಲ್ಲಿ ನೀಡುವ ಎಲ್ಲಾ ಅಂಶಗಳ ಕುರಿತು ಮಾಹಿತಿ ಪಡೆಯುವ ಜೊತೆಗೆ ನಿಮ್ಮ ಪೋಷಕರಿಗೂ ತಿಳಿಸಬೇಕು. ಮತದಾನ ಪ್ರಕ್ರಿಯೆಯ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಿಕೊಳ್ಳುವ ಜೊತೆಗೆ ಗ್ರಾಮದಲ್ಲಿರುವ ಎಲ್ಲರೂ ಮತದಾನ ಮಾಡಿದರೆ ಮಾತ್ರ ಶೇಕಡಾ 100ರಷ್ಟು ಮತದಾನ ಆಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೆಪಿಸಿದರು.
ಬಳಿಕ ಮಾಸ್ಟರ್ ಟ್ರೈನರ್ ಗಳು ವಿದ್ಯಾರ್ಥಿಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್ ಮಷಿನ್ ಗಳ ಬಗ್ಗೆ ಅದರ ನಿರ್ವಹಣೆ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಇದೇ ವೇಳೆ ಎಲ್ಲಾ ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಣುಕು ಮತದಾನ ಪ್ರಕ್ರಿಯೆಯಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸಂತಸದಿಂದ ಮತದಾನ ಮಾಡಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಹೇಶ, ಯೋಜನಾಧಿಕಾರಿ ರಾಜೇಸಾಬ್ ನದಾಫ್, ಕಾಲೇಜಿನ ಪ್ರಾಚಾರ್ಯ ಗವಿಶಂಕರ್ ಹಾಗೂ ಉಪನ್ಯಾಸಕರು, ಜಿಲ್ಲಾ ಹಾಗೂ ತಾಲೂಕು ಸಂಯೋಜಕರು ಮತ್ತು ಸ್ವೀಪ್ ಸಮಿತಿ ಸದಸ್ಯರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.