ಪಾವಗಡ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕೆಂದು ಮಧುಗಿರಿ ಮಾಜಿ ಜಿಪಂ ಸದಸ್ಯ ಕೆಂಚಮಾರಪ್ಪ ಒತ್ತಾಯಿಸಿದ್ದಾರೆ.
ಶುಕ್ರವಾರ ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಎಡಗೈ ಸಮುದಾಯದ ಮುಖಂಡರುಗಳಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮುದಾಯವರಿಗೆ ಟಿಕೆಟ್ ನೀಡಬೇಕು
ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯದವರನ್ನು ನಿರ್ಲಕ್ಷಿಸಿದೆ ಟಿಕೆಟ್ ನೀಡಿದರೆ ಮಾತ್ರ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದು ಈ ಮೂಲಕ ಹೈಕಮಾಂಡ್ ಅನ್ನು ಒತ್ತಾಯಿಸಿದರು.
ಆಲ್ ಇಂಡಿಯಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾರ್ಚ್ 05 ರಂದು ಕೊರಟಗೆರೆಗೆ ಆಗಮಿಸಲಿದ್ದು ಪಾವಗಡ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜನರ ಜೀವನ ಸುಗಮಗೊಳಿಸಲು ಹಲವು ಜನಪರ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುವುದು. ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ನೀಡಲಾಗುವುದು ಹಾಗೂ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು 10 ಕೆಜಿ ಅಕ್ಕಿ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೋರ್ಟ್ ನರಸಪ್ಪ ಮಾತನಾಡುತ್ತಾ 1989ರಿಂದ ಪಾವಗಡ ತಾಲ್ಲೂಕಿನಲ್ಲಿ ಎಡಗೈ ಸಮುದಾಯದವರನ್ನು ನಿರ್ಲಕ್ಷ ಮಾಡಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಮ್ಮ ಎಡಗೈ ಸಮುದಾಯದವರನ್ನು ಗುರುತಿಸಿ ಟಿಕೆಟ್ ನೀಡಲಿ. ನಮ್ಮ ಸಮುದಾಯದಿಂದ ಹಿರಿಯರಾದ ಮಾಜಿ ಸಂಸದ ಚಂದ್ರಪ್ಪ, ಕೆಂಚಮಾರಣ್ಣ, ಅರುಂಧತಿ ಹಾಗೂ ನಾನು ಸಹಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಇವರಲ್ಲಿ ಯಾರನ್ನಾದರೂ ಗುರುತಿಸಿ ಟಿಕೆಟ್ ನೀಡಿದರೆ ನಾವೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಹೇಳಿದರು.
ಈ ಕ್ಷೇತ್ರದ ಮಹಿಳಾ ಅಭ್ಯರ್ಥಿ ಆಕಾಂಕ್ಷಿಯಾದ ಅರುಂಧತಿ ಅವರು ಮಾತಾಡುತ್ತಾ , ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮುದಾಯದವರಿಗೆ ಅವಕಾಶ ಕಡಿಮೆಯಾಗಿರುವುದರಿಂದ ಪಕ್ಷ ನಮ್ಮನ್ನು ಸಹ ಪರಿಗಣಿಸಿ ಸಮುದಾಯದಲ್ಲಿ ಯಾರಿಗಾದರೂ ಸರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಡಿ ಜೆ ಎಸ್ ನಾರಾಯಣಪ್ಪ, ಕೃಷ್ಣಮೂರ್ತಿ, ಗುತ್ತಿಗೆದಾರ ದುಗ್ಗಪ್ಪ, ನರಸಿಂಹ, ಶಿವಕುಮಾರ್, ಸೇರಿದಂತೆ ದಲಿತ ಸಂಘಟನೆಗಳ ಅಧ್ಯಕ್ಷರು ಮುಖಂಡರು ಹಾಗೂ ಸಮುದಾಯದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:- ಅನಿಲ್ ಯಾದವ್ ಪಾವಗಡ ತಾಲ್ಲೂಕು..
Tags
ರಾಜಕೀಯ