ಹಿಂದೂಗಳ ವರ್ಷದ ಮೊದಲ ಹಬ್ಬ ಯುಗಾದಿ, ಈ ಹಬ್ಬದಂದು ಬೇವು-ಬೆಲ್ಲ ತಿಂದು ಹಿರಿಯರ ಆಶೀರ್ವಾದ ಪಡೆಯುವುದು ಸಂಪ್ರದಾಯ.
ಹಿಂದೂ ಪುರಾಣಗಳ ಪ್ರಕಾರ ಈ ದಿನ ಬ್ರಹ್ಮ ದೇವನು ಬ್ರಹ್ಮಾಂಡವನ್ನು ಸೃಷ್ಟಿಸಿದನು ಎನ್ನಲಾಗಿದೆ. ಭಾರತದಲ್ಲಿ ವಸಂತ ಋತು ಉತ್ತುಂಗದಲ್ಲಿರುವಾಗ ಮತ್ತು ರೈತರು ಹೊಸ ಬೆಳೆ ಪಡೆದುಕೊಳ್ಳುವ ಸಮಯದಲ್ಲಿ ಯುಗಾದಿಯನ್ನು ಆಚರಿಸಲಾಗುತ್ತದೆ.
ಬೇವು ಬೆಲ್ಲ ಹಂಚೋದು ಯಾಕೆ?
ಬೇವು ಬೆಲ್ಲ ಎಂದ ತಕ್ಷಣ ಏನನ್ನಿಸುತ್ತದೆ ಹೇಳಿ? ಒಂದು ಸಿಹಿ ಇನ್ನೊಂದು ಕಹಿ, ಎರಡನ್ನೂ ಮಿಶ್ರಣ ಮಾಡಿ ಪ್ರಸಾದದಂತೆ ಸೇವನೆ ಮಾಡಲಾಗುತ್ತದೆ. ಜೀವನದಲ್ಲಿಯೂ ಸಿಹಿ-ಕಹಿ ಇದ್ದೇ ಇರುತ್ತದೆ ಆದರೆ ಅದನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವುದು ಇದರ ಅರ್ಥವಾಗಿದೆ.
ಬೇವು-ಬೆಲ್ಲ ತಿಂದರೆ ಆರೋಗ್ಯ
ಈ ಹಬ್ಬದಂದು ಬೇವಿನ ಎಲೆ ಹಾಗೂ ಹೂವುಗಳನ್ನು ಬೆಲ್ಲ ಹಾಗೂ ಕಡ್ಲೆಹಿಟ್ಟಿನ ಜತೆ ಸೇವಿಸಲಾಗುತ್ತದೆ. ಬೇವು ರಕ್ತ ಶುದ್ಧೀಕರಣ, ಉತ್ತಮ ಚರ್ಮಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಹಬ್ಬದ ಸಮಯ ಎಂದು ಭೂರಿ ಭೋಜನ ಮಾಡುವುದು ಸಾಮಾನ್ಯ, ಪಚನಕ್ರಿಯೆಗೆ ಸಹಾಯವಾಗಲೆಂದು ಪೂಜೆ ನಂತರ ಬೇವು-ಬೆಲ್ಲ ನೀಡಲಾಗುತ್ತದೆ. ಬೆಲ್ಲ ಸೇವನೆಯಿಂದ ದೇಹ ತಂಪಾಗುತ್ತದೆ ಹಾಗೆ ದೇಹದ ಕೆಟ್ಟ ಕೊಬ್ಬು ಕರಗುತ್ತದೆ.
ಬೇವು ಬೆಲ್ಲ ಸೇವಿಸೋದು ಹೇಗೆ?
ಯುಗಾದಿ ದಿನ ಬೆಳಗ್ಗೆ ಬೇಗನೆ ಎದ್ದು, ಅಭ್ಯಂಜನ ಸ್ನಾನ ಮಾಡಬೇಕು. ನಂತರ ದೇವರ ಪೂಜೆ ಮಾಡಬೇಕು, ದೇಗುಲಗಳಿಗೂ ತೆರಳಬಹುದು. ಹೊಸ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು. ನಂತರ ಹಿರಿಯರ ಬಳಿ ಬೇವು, ಬೆಲ್ಲ ಪಡೆದು ಸೇವಿಸಿ, ಅವರ ಆಶೀರ್ವಾದ ಪಡೆಯಿರಿ.