ಸೆಮಿಫೈನಲ್ ಹೊತ್ತಲ್ಲಿ ಸೈಲೆಂಟ್ ಆದ ಮೋರ್ಚಾಗಳು
ಕುಕನೂರು : 2023 ರ ರಾಜ್ಯ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ.ಸಚಿವ ಹಾಲಪ್ಪ ಆಚಾರ್ ಕುಟುಂಬ ಮಾತ್ರ ಸಕ್ರಿಯವಾಗಿ ತಮ್ಮ ಕಾರ್ಯದಲ್ಲಿ ತೊಡಗಿದೆ. ಬಿಜೆಪಿಯ ಮೋರ್ಚಾಗಳು ಸೈಲೆಂಟ್ ಆಗಿದ್ದು ಅಚ್ಚರಿಗೆ ಕಾರಣವಾಗಿದೆ.
ಹೇಳಿ ಕೇಳಿ ಈಗ ಚುನಾವಣೆ ಸೆಮಿ ಫೈನಲ್ ಇದ್ದಂತೆ,2023 ರ ಎಲೆಕ್ಷನ್ ಜಿದ್ದಾ ಜಿದ್ದಿನಿಂದ ಕೂಡಿರುವುದಂತೂ ಸ್ಪಷ್ಟ. ಇಂತಹ ಸೆಮಿ ಫೈನಲ್ ಹೊತ್ತಲ್ಲಿ ಬಿಜೆಪಿ ಮೋರ್ಚಾಗಳು ಸಕ್ರಿಯವಾಗಿಲ್ಲದಿರುವುದು ಸ್ವತಃ ಹಾಲಪ್ಪ ಆಚಾರ್ ಕುಟುಂಬಕ್ಕೆ ಇರುಸು ಮುರುಸು ತಂದಿದೆ ಎಂದು ಅದೇ ಪಕ್ಷದ ಕೆಲವು ನಾಯಕರು ಹೇಳಿಕೊಳ್ಳುತ್ತಿದ್ದಾರೆ.
ಅನಿಲ್ ಆಚಾರ್, ಸಚಿನ್ ಆಚಾರ್, ಬಸವರಾಜ್ ಗೌರಾ ಅದೀಯಾಗಿ ಸಚಿವ ಹಾಲಪ್ಪ ಆಚಾರ್ ಅವರ ಕುಟುಂಬ 2023 ರ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹಗಲಿರುಳು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕರೊಂದಿಗೆ, ಮತದಾರರೊಂಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಆದರೆ ಇದಕ್ಕೆ ವ್ಯತೀರಿಕ್ತ ಎಂಬಂತೆ ಮೋರ್ಚಾದ ಕೆಲವು ಯುವ ಮುಖಂಡರು, ಇತರ ಕೆಲವು ನಾಯಕರು ಮದುವೆ, ಮಸ್ತಿಯಲ್ಲಿ ಕಾಲಹರಣ ಮಾಡುತ್ತಿರುವುದು ಪಕ್ಷದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.
ಪಕ್ಷದ ಕಾರ್ಯಕ್ರಮ ಇದ್ದಾಗ ಮಾತ್ರ ಹಿರಿಯ ನಾಯಕರೊಂದಿಗಿನ ಸೆಲ್ಫಿ ಫೋಟೋ ತೆಗೆದು ಕೊಂಡು ತಮ್ಮ ತಮ್ಮ ವಾಟ್ಸಪ್, ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಬಿಟ್ಟರೆ ಸಾಕು ನಮ್ಮ ಕೆಲಸ ಮುಗಿತು ಎಂಬಂತೆ ಕೆಲವು ಮೋರ್ಚಾಗಳ ನಾಯಕರು. ನಿಜವಾದ ಪಕ್ಷ ಸಂಘಟನೆ, ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವಲ್ಲಿ ಮೋರ್ಚಾಗಳು ಇನ್ನೂ ಎಚ್ಚರಗೊಂಡಿಲ್ಲ.
ಎಸ್ ಸಿ, ಎಸ್ ಟಿ, ಓ ಬಿ ಸಿ, ಅಲ್ಪಸಂಖ್ಯಾತ, ಯುವ ಮೋರ್ಚಾ,ಮಹಿಳಾ ಮೋರ್ಚಾ ನಗರ ಘಟಕ ಹೀಗೆ ಹಲವಾರು ಘಟಕಗಳಿಂದ ಪಕ್ಷ ಸಂಘಟನೆ, ಉತ್ತಮ ಪರ್ಫಾರ್ಮೆನ್ಸ್ ನಿರೀಕ್ಷೆಯಲ್ಲಿ ಯಲಬುರ್ಗಾ ಮಂಡಲ ಬಿಜೆಪಿ ಇದ್ದು, ಮೋರ್ಚಾಗಳು ಯಾವ ರೀತಿ ತೊಡಗಿಕೊಳ್ಳುತ್ತಾರೆ ಎಂಬುದನ್ನು ಬಿಜೆಪಿ ಯಲಬುರ್ಗಾ ಮಂಡಲ ಕಾದು ನೋಡುತ್ತಿದೆ.
Tags
ರಾಜಕೀಯ