10 ಮತ್ತು 12ನೇ ತರಗತಿಯ NCERT ಪಠ್ಯಪುಸ್ತಕದಲ್ಲಿ ತಂದಿರುವ ಅಪ್ರಜಾತಾಂತ್ರಿಕ ಮತ್ತು ನಿರಂಕುಶ ತಿದ್ದುಪಡಿಗಳನ್ನು ಹಿಂಪಡೆಯಿರಿ
ಕೊಪ್ಪಳ:
ಆಡಳಿತರೂಢ ಬಿಜೆಪಿಯ ಕೋಮು ಮತ್ತು ವಿಭಜಕ ರಾಜಕೀಯದ ಮೂಗಿನ ನೇರಕ್ಕೆ NCERT ಯ ಇತಿಹಾಸ, ಪೌರಶಾಸ್ತ್ರ, ಹಿಂದಿ ಮತ್ತು ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಲ್ಲಿ ತಂದಿರುವ ತಿದ್ದುಪಡಿ ಅತ್ಯಂತ ಖಂಡನೀಯವಾಗಿದೆ. ಇದು ತಾರ್ಕಿಕ ಚಿಂತನೆ, ಸಂಸ್ಕೃತಿ ಮತ್ತು ನಾಗರಿಕತೆಯ ಮೇಲೆ ನಡೆಸಲಾಗಿರುವ ಅಪರಾಧವಾಗಿದೆ ಎಂದು ಎಐಡಿಎಸ್ಓ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಅಜಯ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರವು ಮತ್ತೆ ತನ್ನ ಅನೈತಿಕ ಹಾಗೂ ಅಪ್ರಜಾತಾಂತ್ರಿಕ ನಿಲುವನ್ನು ಪ್ರದರ್ಶಿಸಿದೆ. ಸ್ವಾತಂತ್ರ್ಯ ಸಂಗ್ರಾಮ, ಸಾಂಸ್ಕೃತಿಕ ಪರಂಪರೆ ಮತ್ತು ವೈವಿದ್ಯತೆ ಸೇರಿದಂತೆ ಮುಂತಾದವುಗಳ ಕುರಿತು ಜ್ಞಾನವನ್ನು ಒದಗಿಸುತ್ತಿದ್ದ ಪಾಠಗಳನ್ನು ಕೈಬಿಡಲಾಗಿದೆ. 'ಪ್ರಜಾತಂತ್ರ ಮತ್ತು ವೈವಿಧ್ಯತೆ', 'ಜನ ಚಳವಳಿ ಮತ್ತು ಹೋರಾಟಗಳು', 'ಪ್ರಜಾತಂತ್ರದ ಸವಾಲುಗಳು', 'ಮೊಘಲ್ ಆಳ್ವಿಕರು ಮತ್ತು ಅವರ ಆಳ್ವಿಕೆ', 'ವಸಾಹತುಶಾಹಿ ನಗರಗಳು' ಮತ್ತು 'ಭಾರತದ ವಿಭಜನೆ'ಯಂತಹ ಅನೇಕ ಮಹತ್ವಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ. ಇರಾಕ್ ಗೋರಕ್ಪುರಿಯವರ ಗಜಲ್ ಗಳು, ಸೂರ್ಯಕಾಂತ ತ್ರಿಪಾಟಿ ಅವರ ಕವಿತೆಗಳು, ಚಾರ್ಲಿ ಚಾಪ್ಲಿನ್ ಕುರಿತ ಪಾಠ ಮುಂತಾದ ಪ್ರಜಾತಾಂತ್ರಿಕ ಹಾಗೂ ಮೌಲ್ಯಯುತ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ.
ಬಿಜೆಪಿ ಸರ್ಕಾರವು ಇತಿಹಾಸವನ್ನು ತಿರುಚುವ ತನ್ನ ಪೂರ್ವನಿಯೋಜಿತ ಹೀನ ಉದ್ದೇಶದಿಂದ ಈ ಕೆಲಸವನ್ನು ಮಾಡಿದೆ. ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ರಕ್ಷಿಸಲು ಪಠ್ಯಪುಸ್ತಕದಲ್ಲಿನ ಈ ನಿರಂಕುಶ ಬದಲಾವಣೆಯ ವಿರುದ್ಧ ಧ್ವನಿ ಎತ್ತುವಂತೆ ರಾಜ್ಯದ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾಮಾನ್ಯ ಜನತೆಯಲ್ಲಿ ಎಐಡಿಎಸ್ಓ ವಿನಂತಿಸಿಕೊಂಡರು.
ಬ್ಯೀರೋ ರೀಪೋರ್ಟ್
Tags
ರಾಜ್ಯ