ಬಿಜೆಪಿ ಪರ ಪ್ರಚಾರಕ್ಕೆ ಕಿಚ್ಚ ಸುದೀಪ್ ರೆಡಿ: ಅತ್ತ ಚುನಾವಣೆ ಆಯೋಗದ ಮೊರೆಹೋದ JDS!
ಕರ್ನಾಟಕ ಚುನಾವಣೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ನಟ ಕಿಚ್ಚ ಸುದೀಪ್ ಘೋಷಿಸಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ನಡುವೆ ನಟ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್ 14 ರಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಬೊಮ್ಮಾಯಿ ಕಣಕ್ಕಿಳಿಯಲಿರುವ ಶಿಗ್ಗಾಂವಿ ಜೊತೆಗೆ ಇನ್ನೂ ಕೆಲ ಕ್ಷೇತ್ರಗಳಲ್ಲಿ ಅವರು ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ. ಆದ್ರೆ, ಕಿಚ್ಚ ಎಲ್ಲಿಂದ ಪ್ರಚಾರ ಆರಂಭಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಅನುಮತಿ ನೀಡಬಾರದು ಎಂದು ಜೆಡಿಎಸ್, ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಚುನಾವಣೆ ಮುಗಿಯುವವರೆಗೆ ಸುದೀಪ್ ನಟನೆಯ ಯಾವುದೇ ಶೋ ಮತ್ತು ಅವರ ಭಾವಚಿತ್ರವಿರುವ ಜಾಹೀರಾತುಗಳ ಪ್ರಸಾರಕ್ಕೆ ತಡೆ ಹಿಡಿಯಬೇಕು ಎಂದು ಜೆಡಿಎಸ್ ಕಾನೂನು ಘಟಕ ಪತ್ರದ ಮೂಲಕ ಚುನಾವಣೆ ಆಯೋಗಕ್ಕೆ ಮನವಿ ಮಾಡಿದೆ.
ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಸುದೀಪ್ ಅವರು ಸಿಎಂ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬೊಮ್ಮಾಯಿ ಅವರನ್ನು ತಿಳಿಸಿದ್ದರು. ಅಲ್ಲದೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಬೊಮ್ಮಾಯಿ ಅವರು ಹೇಳಿದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಾಗಿ ತಿಳಿಸಿದ್ದರು.
ವರದಿ : ಬಸವರಾಜ ಕಬಡ್ಡಿ
Tags
ರಾಜಕೀಯ