ಅವಿರೋಧ ಆಯ್ಕೆ ಬೇಡಕುಸ್ತಿನೇ ಬೇಕು: ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಕೊಟ್ರು ಬಹಿರಂಗ ಆಹ್ವಾನ??
ನನಗೆ ಅವಿರೋಧ ಆಯ್ಕೆ ಆಗುವುದು ಬೇಡ. ನನಗೆ ಕುಸ್ತಿನೇ ಬೇಕು ಆಗಲೇ ಯಾರ ಶಕ್ತಿ ಏನು ಎಂದು ತಿಳಿಯುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗವಾಗಿ ಪಂಥಾಹ್ವಾನ ಮಾಡಿದರು.
ಜಿಲ್ಲೆಯ ಶಿಗ್ಗಾವಿಯಲ್ಲಿ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಖಾಡಕ್ಕೆ ಯಾರೂ ಬೇಕಾದರೂ ಬರಬಹುದು, ಸೆಡ್ಡು ಹೊಡೆದೇ ಬಿಡೋದು, ಬೇರೆ ಪ್ರಶ್ನೆಯೇ ಇಲ್ಲ ಎಂದು ಸವಾಲು ಹಾಕಿದರು. ಕುಸ್ತಿ ಪಟ್ಟು ಅಭ್ಯಾಸ ಮಾಡಿಕೊಂಡು ಬರಬೇಕು ಏಕೆಂದರೆ ಹೊಸ ಕುಸ್ತಿ ಹೊಸ ಪಟ್ಟು ಇರಲಿವೆ ನಾವು ಅಂತಹ ಪಟ್ಟುಗಳಲ್ಲಿ ಪಳಗಿದವರು ಎಂದು ಬಸವರಾಜ ಬೊಮ್ಮಾಯಿ ಸೆಡ್ಡು ಹೊಡೆದರು.
ತಲೆ ಮೇಲಿನ ಕೈ ತೆಗೆದಿಲ್ಲ
ಮೀಸಲಾತಿ ನಿರ್ಣಯ ಮಾಡಿದಾಗ ತಲೆ ಮೇಲೆ ಕೈ ಇಟ್ಟುಕೊಂಡ ವಿರೋಧ ಪಕ್ಷಗಳು ಇನ್ನೂ ತಲೆ ಮೇಲಿನ ಕೈ ತೆಗೆದಿಲ್ಲ. ದೇಶದಲ್ಲಿಯೇ ಯಾರೂ ಮಾಡಿರದ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ ಸಾಹಸವನ್ನು ಮಾಡಿರುವುದಾಗಿ ಹೇಳಿದರು.
ದೆಹಲಿಯಿಂದ ಬಂದ ವಿರೋಧ ಪಕ್ಷದ ನಾಯಕ ಇದನ್ನು ಸಂವಿಧಾನ ವಿರೋಧಿ ಎಂದರು. ಕಾಂಗ್ರೆಸ್ ನದ್ದು ದ್ವಿಮುಖ ನೀತಿ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡುವುದಾಗಿ ಒಂದೆಡೆ, ಮಾಡುವುದಿಲ್ಲ ಎಂದು ಮತ್ತೊಂದೆಡೆ ಹೇಳುತ್ತಾರೆ. ಇದು ದ್ವಿಮುಖ ನೀತಿ ಅಲ್ಲವಾ? ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಆಡಳಿತ ಮಾಡಿದರು. ಶಿಗ್ಗಾಂವಿ ನನ್ನ ಆತ್ಮವಿಶ್ವಾಸ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಬರುವ ೫ ವರ್ಷಗಳಲ್ಲಿ ೧೫ ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ ಇರುವ ಶಿಗ್ಗಾಂವಿಯಲ್ಲಿ ಪರೀಕ್ಷೆಗೆ ಇಳಿಯುವುದಾಗಿ ಸ್ಪಷ್ಟಪಡಿಸಿದರು.
ಬಿಜೆಪಿ ಒಂದು ಸಮುದ್ರ ಇದ್ದ ಹಾಗೆ ಹಳ್ಳ ಕೊಳ್ಳ ಇವೆಯಾದರೂ ಹಳ್ಳದ ನೀರೂ ಸಮುದ್ರ ಸೇರಲೇಬೇಕು. ಸಮುದ್ರ ಮಂಥನ ಆಗಲಿದೆ. ಏನೇ ವಿಷ ಬಂದರೂ ಸ್ವೀಕಾರ ಮಾಡಿ ಜನರಿಗೆ ಅಮೃತ ಕೊಡುತ್ತೇವೆ. ಏನೇ ಅಪಪ್ರಚಾರ ಮಾಡಿದರೂ ಆತ್ಮ ಸಾಕ್ಷಿಯಿಂದ ನಿರ್ಣಯ ಮಾಡಿರುವುದಾಗಿ ತಿಳಿಸಿದರು.
ನಿನ್ನೆ ಬಿಜೆಪಿ ಸಂಸ್ಥಾಪಕ ದಿನಾಚರಣೆ ಆಚರಿಸಲಾಗಿದ್ದು, ಮೊದಲ ದಿನ ಶಿಗ್ಗಾವಿ ತಾಲೂಕಿನಲ್ಲಿ ಬಿಜೆಪಿ ಶಕ್ತಿ ಇಮ್ಮಡಿ ಆಗಿದೆ. ಈ ಕಾರ್ಯಕ್ರಮ ಬಿಜೆಪಿ ಮತ್ತೆ ರಾಜ್ಯದಲ್ಲಿ ಸಂಪೂರ್ಣವಾಗಿ ಅಧಿಕಾರಕ್ಕೆ ಬರುವ ದಿಕ್ಸೂಚಿಯಾಗಿದೆ ಎಂದರು.
ವರದಿ : ಬಸವರಾಜ ಕಬಡ್ಡಿ
Tags
ರಾಜಕೀಯ