ಜೆಸಿಐ ಕಂಪ್ಲಿ ಸೋನಾ ಹಾಗೂ ಕಂಪ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ
ಕಂಪ್ಲಿ.ಏ.27: ತಾಲೂಕಿನ ಐತಿಹಾಸಿಕ ಸೋಮೇಶ್ವರ ಜಾತ್ರೆಯಲ್ಲಿ ಚುನಾವಣಾ ಆಯೋಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತಿ ಸ್ವೀಪ್ ಸಮಿತಿ ಮತ್ತು ಜೆಸಿಐ ಕಂಪ್ಲಿ ಸೋನಾ ಇವರ ಸಂಯುಕ್ತಾಶ್ರಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಸೋಮಪ್ಪ ಜಾತ್ರೆಯಲ್ಲಿ ಭಾಗಿಯಾಗುವ ಸಾರ್ವಜನಿಕರು ಹಾಗೂ ಮತದಾರರಿಗೆ ಮತದಾನದ ಜಾಗೃತಿಯ ಕಾರ್ಯಕ್ರಮವು ಜರುಗಿತು.
ಜೆಸಿಐ ಕಂಪ್ಲಿ ಸೋನಾ ಮತ್ತು ಕಂಪ್ಲಿ ತಾಲೂಕು ಸ್ವೀಪ್ ಸಮಿತಿಯ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು.
ಜಾಗೃತಿ ಗೀತೆಗಳೊಂದಿಗೆ ಜಾಥಾವು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಜಾಥಾಕ್ಕೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಮಲ್ಲನಗೌಡ ಚಾಲನೆ ನೀಡಿದರು. ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿ ಬಳಿಕ ಮಾತನಾಡಿದ ಅವರು, ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ.100 ರಷ್ಟು ಮತ ಚಲಾಯಿಸಿ ಯೋಗ್ಯ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ನಂತರ ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮಾತನಾಡಿ ನನ್ನ ಮತ, ನನ್ನ ಹಕ್ಕು ಹಾಗೂ ಮತದಾನ ಮಾಡುವವನೇ ಮಹಾಶೂರ ಎಂದರು.
ಕಂಪ್ಲಿ ಜೆ.ಸಿ.ಐ ಸೋನಾ ಅಧ್ಯಕ್ಷ ಸಂತೋಷ ಕೊಟ್ರಪ್ಪ ಸೋಗಿ ಮಾತನಾಡಿ ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮಿಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ವಿಜಯಪ್ರತಾಪ್,ಎ.ಎಸ್.ಐ.ಮೋರೆ ವೆಂಕೋಬರಾವ್,ಕಂಪ್ಲಿ ಜೆಸಿಐ ಸೋನಾ ವಲಯ ಅಧಿಕಾರಿ ಇಂದ್ರಜಿತ್ ಸಿಂಗ್, ಪ್ರಧಾನ ಕಾರ್ಯದರ್ಶಿ ಅಮರನಾಥ ಶಾಸ್ತ್ರಿ,ನಿರ್ದೇಶಕರಾದ ಬಿ.ರಸೂಲ್, ಸಿದ್ದರಾಮೇಶ್ವರ ಶಾಸ್ತ್ರಿ,ಜೆಜೆಸಿ ತೌಫಿಕ್ ಹಾಗೂ ಪುರಸಭೆ ಹಿರಿಯ ಆರೋಗ್ಯ ನೀರಿಕ್ಷಕ ಪ್ರಕಾಶಬಾಬು,ಸಿಬ್ಬಂದಿಗಳಾದ ಮಂಜುನಾಥ,ಸುಧಾಕರ ಸೇರಿದಂತೆ ಅನೇಕರಿದ್ದರು.
ವರದಿ : ಚನ್ನಕೇಶವ
Tags
ರಾಜ್ಯ