ಶಾಲಾ ಪಠ್ಯದಿಂದ ಡಾರ್ವಿನ್ ಸಿದ್ಧಾಂತವನ್ನು ತೆಗೆದುಹಾಕಿರುವ ಹೀನ ಕ್ರಮವನ್ನು ಉಗ್ರವಾಗಿ ವಿರೋಧಿಸಿ : AIDSO
ಶಾಲಾ ಪಠ್ಯ ಪುಸ್ತಕದಿಂದ ಡಾರ್ವಿನ್ ಸಿದ್ಧಾಂತ ಹಾಗೂ ಇನ್ನಿತರ ವಿಷಯಗಳನ್ನು ತೆಗೆದುಹಾಕಿರುವ ಬಿಜೆಪಿ ಸರ್ಕಾರದ ನಿರಂಕುಶ ಸರ್ವಾಧಿಕಾರಿ ನಡೆಯನ್ನು ಉಗ್ರವಾಗಿ ಖಂಡಿಸುತ್ತಾ, AIDSO ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಕೆಳಗಿನ ಹೇಳಿಕೆ ನೀಡಿದ್ದಾರೆ.
ಪಾಠಗಳ ಹೊರೆಯನ್ನು ಕಡಿಮೆ ಮಾಡುತ್ತೇವೆ ಎಂಬ ನೆಪವೊಡ್ಡಿ, NCERT ತಂದಿರುವ ಈ ಬದಲಾವಣೆಗಳು ಹಲವು ರೀತಿಯಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. 10ನೇ ತರಗತಿ ಪಠ್ಯದಿಂದ ವಿಕಾಸ ಸಿದ್ಧಾಂತವನ್ನು ತೆಗೆದು ಹಾಕಲಾಗಿದೆ. ಅಂದರೆ, ಪಿಯುಸಿಗೆ ಬಂದಾಗ ಅದೂ ಆ ವಿದ್ಯಾರ್ಥಿಯೂ ವಿಜ್ಞಾನ ವಿಭಾಗ ಆಯ್ಕೆ ಮಾಡಿದರೆ ಮಾತ್ರ ವಿಕಾಸ ಸಿದ್ಧಾಂತವನ್ನು ಓದಬಹುದು. ಡಾರ್ವಿನ್ ರ ಜೀವ ವಿಕಾಸ ಸಿದ್ಧಾಂತವು ನಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಮಹತ್ವಪೂರ್ಣ ಜ್ಞಾನವನ್ನು ನೀಡುತ್ತದೆ. ಜೀವ ವಿಕಾಸಕ್ಕೆ ಕುರಿತ ಧಾರ್ಮಿಕ ನಂಬಿಕೆಗಳ ಸುತ್ತ ಹುಟ್ಟಿಕೊಂಡಿದ್ದ ಹಲವು ಗೊಂದಲಗಳಿಗೆ ಈ ಸಿದ್ಧಾಂತ ಉತ್ತರ ನೀಡಿದೆ. ಬಹುಮುಖ್ಯವಾಗಿ, ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಇದು ಮಹತ್ವಪೂರ್ಣ ಸಿದ್ಧಾಂತ. ಡಾರ್ವಿನ್ ರ ಸತತ ಪರಿಶ್ರಮ ಮತ್ತು ಒಳನೋಟದಿಂದ ನೈಸರ್ಗಿಕ ಆಯ್ಕೆಯ ಸಿದ್ಧಾಂತವು ರೂಪುಗೊಂಡಿತು. ಈ ಪ್ರಯತ್ನಗಳು ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಕ್ರಿಯೆ ಮತ್ತು ವಿಮರ್ಶಾತ್ಮಕ ಚಿಂತನೆಯ ಮಹತ್ವದ ಬಗ್ಗೆ ಶಿಕ್ಷಣ ನೀಡುತ್ತವೆ. ಪ್ರಪಂಚದ ಸಮಗ್ರ ಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರತಿಯೊಬ್ಬ ವಿದ್ಯಾರ್ಥಿಯು ವಿಕಾಸದ ಮೂಲಭೂತ ತಿಳುವಳಿಕೆಯನ್ನು ಹೊಂದಿರಬೇಕು.
ಮುಂದುವರೆದು, ಸ್ವಾತಂತ್ರ್ಯ ಸಂಗ್ರಾಮ, ಸಾಂಸ್ಕೃತಿಕ ಪರಂಪರೆ ಮತ್ತು ವೈವಿದ್ಯತೆ ಸೇರಿದಂತೆ ಮುಂತಾದವುಗಳ ಕುರಿತು ಜ್ಞಾನವನ್ನು ಒದಗಿಸುತ್ತಿದ್ದ ಪಾಠಗಳನ್ನು ಕೈಬಿಡಲಾಗಿದೆ. 'ಪ್ರಜಾತಂತ್ರ ಮತ್ತು ವೈವಿಧ್ಯತೆ', 'ಜನ ಚಳವಳಿ ಮತ್ತು ಹೋರಾಟಗಳು', 'ಪ್ರಜಾತಂತ್ರದ ಸವಾಲುಗಳು', 'ಮೊಘಲ್ ಆಳ್ವಿಕರು ಮತ್ತು ಅವರ ಆಳ್ವಿಕೆ', 'ವಸಾಹತುಶಾಹಿ ನಗರಗಳು' ಮತ್ತು 'ಭಾರತದ ವಿಭಜನೆ' ಯಂತಹ ಅನೇಕ ಮಹತ್ವಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ. ಇರಾಕ್ ಗೋರಕ್ಪುರಿಯವರ ಗಜಲ್ ಗಳು, ಸೂರ್ಯಕಾಂತ ತ್ರಿಪಾಟಿ ಅವರ ಕವಿತೆಗಳು, ಚಾರ್ಲಿ ಚಾಪ್ಲಿನ್ ಕುರಿತ ಪಾಠ ಮುಂತಾದ ಪ್ರಜಾತಾಂತ್ರಿಕ ಹಾಗೂ ಮೌಲ್ಯಯುತ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಈ ಎಲ್ಲಾ ಬದಲಾವಣೆಗಳು "ಹಿಂದುತ್ವ"ದ ಪರಿಕಲ್ಪನೆಯನ್ನು ಪ್ರಚಾರ ಮಾಡಲು ಮತ್ತು ಮತಾಂಧತೆ ಮತ್ತು ವರ್ಣಭೇದ ನೀತಿಯನ್ನು ಅನುಸರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಂತಿಮವಾಗಿ 'ಹಿಂದುತ್ವ' ಗುಂಪಿನ ಗುರಿಯಾಗಿರುವ ಫ್ಯಾಸಿಸಂ ಅನ್ನು ತರಲು ಇದು ಸುಲಭವಾಗುತ್ತದೆ. ಸ್ವಾಯತ್ತ ಸಂಸ್ಥೆಯಾದ NCERT ಯನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬ ಆತಂಕವೂ ನಮಗಿದೆ.
ಆದ್ದರಿಂದ AIDSO ಈ ಕ್ರಮವನ್ನು ಬಲವಾಗಿ ವಿರೋಧಿಸುತ್ತದೆ ಮತ್ತು NCERT ಅನ್ನು ತಕ್ಷಣವೇ ಹಿಂಪಡೆಯಲು ಒತ್ತಾಯಿಸುತ್ತದೆ. ನಮ್ಮ ದೇಶವನ್ನು ಉಳಿಸಲು, ಶಿಕ್ಷಣದ ಮೇಲಿನ ಈ ದಾಳಿಯನ್ನು ವಿರೋಧಿಸಬೇಕು ಎಂದು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣವನ್ನು ಪ್ರೀತಿಸುವ ನಾಗರಿಕರಿಗೆ AIDSO ಕರೆ ನೀಡುತ್ತದೆ.
ಗಂಗರಾಜ ಅಳ್ಳಳ್ಳಿ,ಜಿಲ್ಲಾ ಸಂಚಾಲಕರು,AIDSO ಕೊಪ್ಪಳ