Koppal : ಅಪಾರ ಸಂಖ್ಯೆಯ ಬೆಂಬಲಿಗರ ಜೊತೆ ಜೆಡಿಎಸ್ ಅಭ್ಯರ್ಥಿ CVC ನಾಮಪತ್ರ ಸಲ್ಲಿಕೆ

 ಅಪಾರ ಸಂಖ್ಯೆಯ ಬೆಂಬಲಿಗರ ಜೊತೆ ಜೆಡಿಎಸ್ ಅಭ್ಯರ್ಥಿ CVC ನಾಮಪತ್ರ ಸಲ್ಲಿಕೆ
- ಇದು ಸ್ವಾಭಿಮಾನ, ಬದಲಾವಣೆ, ಹೊಸತನ ಹಾಗೂ ಅಭಿವೃದ್ಧಿಯ ಚುನಾವಣೆ : ಸಿವಿಸಿ

ಕೊಪ್ಪಳ,: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ ಗುರುವಾರ  ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆಗೆ ಬೃಹತ್‌ ಮೆರವಣಿಗೆ ಮೂಲಕ ನಗರದ ತಹಶಿಲ್ದಾರರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ ಅವರು ನಗರದ ಶ್ರೀಗವಿಮಠಕ್ಕೆ ಭೇಟಿ ನೀಡಿ ಶ್ರೀಗವಿಸಿದ್ದೇಶ್ವರ ಗದ್ದಿಗೆಗೆ ಪೂಜೆ ಸಲ್ಲಿಸಿ, ನಂತರ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು. ಸ್ವಾಮಿಜೀ ಅವರಿಗೆ  ನಮಸ್ಕರಿಸುವಾಗ ಸಿವಿ ಚಂದ್ರಶೇಖರ ಹಾಗೂ ಪತ್ನಿ ಇಬ್ಬರು ಕಣ್ಣೀರು ಹಾಕಿದ ಪ್ರಸಂಗ ಜರುಗಿತು. ಆಗ ಗವಿಶ್ರೀಗಳವರು  ಸಾಂತ್ವನಪಡಿಸಿ ಎಲ್ಲದೂ ಒಳ್ಳೆಯದಾಗಲಿದೆ ಎಂದು ಹರಸಿ ಆಶೀರ್ವದಿಸಿ ಕಳುಹಿಸಿಕೊಟ್ಟರು.  ನಂತರ ಶ್ರೀಗವಿಮಠದ ಆವರಣದಿಂದ ಆರಂಭವಾದ ಮೆರವಣಿಗೆಯು ನಗರದ ಶಾರದ ಚಿತ್ರಮಂದಿರ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ  ಮೆರವಣಿಗೆ ಸಾಗಿ ಬಂತು. ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಅಪಾರ ಅಭಿಮಾನಿಗಳ ಮೂಲಕ ನಾಮಪತ್ರ ಸಲ್ಲಿಸಲು ನಗರದ ರಸ್ತೆಯ ಉದ್ದಕ್ಕೂ ಮೆರವಣಿಗೆಯಲ್ಲಿ ಎತ್ತಿನ ಬಂಡಿ, ಕಲಾ ತಂಡಗಳು ಸಹ ಭಾಗವಹಿಸಿದ್ದವು.

ಪಕ್ಷದ ಅಭ್ಯರ್ಥಿ ಸಿವಿ ಚಂದ್ರಶೇಖರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ1947ರಲ್ಲಿ ಸಿಕ್ಕರೂ ಕೊಪ್ಪಳ ಎರಡು ಕುಟುಂಬಗಳ ಕಪಿ ಮುಷ್ಟಿಗೆ ಸಿಲುಕಿ ನಲುಗಿಹೋಗಿದೆ. ಈ ಎರಡೂ ಕುಟುಂಬಗಳ ಕುಟುಂಬ, ಹೊಂದಾಣಿಕೆ ಹಾಗೂ ಲೂಟಿ ರಾಜಕಾರಣವನ್ನು ಕೊನೆಗೊಳಿಸಿದಾಗಲೇ ಕೊಪ್ಪಳಕ್ಕೆ ಸ್ವಾತಂತ್ರ್ಯ ಸಿಗಲಿದೆ. ಕೊಪ್ಪಳದ ಮತದಾರ ಈಗಾಗಲೇ ಸ್ವಾತಂತ್ರ್ಯ ಪಡೆಯಲು ನಿರ್ಧರಿಸಿದ್ದು ಈ ಸಲ ಜೆಡಿಎಸ್ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಲಿದೆ. ಕೊಪ್ಪಳಕ್ಕೆ ಬದಲಾವಣೆ ಅವಶ್ಯಕತೆಯಿದೆ ಎಂದರು.

ಶ್ರೀ ಗವಿಸಿದ್ಧೇಶ್ವರ ಮಹಾರತೋತ್ಸವವನ್ನು ನೆನಪಿಸುವಂತೆ ಇಲ್ಲಿ ಜನಸಾಗರವೇ ಸೇರಿದೆ. ಇದು ಬದಲಾವಣೆಗೆ, ಹೊಸತನಕ್ಕೆ ಹಾಗೂ ಅಭಿವೃದ್ಧಿಗೆ ಕೊಪ್ಪಳದ ಮತದಾರ ಎಷ್ಟೊಂದು ಹಾತೊರೆಯುತ್ತಾನೆಂಬುದನ್ನು ಸೂಚಿಸುತ್ತದೆ. ಈ ಜನಸ್ತೋಮವನ್ನು ಕಂಡ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಈಗಾಗಲೇ ನಡುಕ ಹುಟ್ಟಿದೆ. ನಾನು ಕನಸಿನಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರುತ್ತಾರೆಂದು ನಿರೀಕ್ಷಿಸಿಯೇ ಇರಲಿಲ್ಲ ಎಂದರು.

ಮೆರವಣಿಗೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ಮುಖಂಡರಾದ ಸುರೇಶ ಭೂಮರಡ್ಡಿ, ಚನ್ನಪ್ಪ ಅಳವಂಡಿ, ಡಾ.ಮಹೇಶ ಗೋವನಕೊಪ್ಪ, ಸಾದಿಕ್ ಅತ್ತಾರ್, ಮಂಜುನಾಥ ಸೊರಟೂರು, ಅಪ್ಸರಸಾಬ ಅತ್ತಾರ್, ಮಹಮೂದ್ ಹುಸೇನ್ ಬಲ್ಲೆ, ಅಯೂಬ್ ಅಡ್ಡೆವಾಲ್, ಲಕ್ಮೀದೇವಿ ಸಿವಿ ಚಂದ್ರಶೇಖರ, ಕೃತಿಕಾ ಬಸವರಾಜ,ವಕ್ತಾರ ಮೌನೇಶ ವಡ್ಡಟ್ಟಿ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಮೆಚ್ಚುಗೆಗೆ ಪಾತ್ರವಾದ ಸ್ವಚ್ಚತಾ ಕಾರ್ಯ :

ಮೆರವಣಿಗೆ ಗವಿಮಠದಿಂದ ಗಡಿಯಾರ ಕಂಬದತ್ತ ತೆರಳಿದ ತಕ್ಷಣ ಮಠದ ಆವರಣದ ರಾಶಿ ರಾಶಿ ಕಸ ಕಂಡು ಬಂದಿತು. ನೀರು ಹಾಗೂ ಮಜ್ಜಿಗೆ ಪ್ಯಾಕೆಟ್‍ಗಳು, ಬಾಟಲ್‍ಗಳು, ಹೂವಿನ ಪೊಕಳೆಗಳು, ಎಲೆಗಳು ಹಾಗೂ ಪ್ಲಾಸ್ಟಿಕ್ ಕಸ ಅಲ್ಲಿಲ್ಲಿ ಬಿದ್ದಿತ್ತು. ಐವತ್ತು ಮಹಿಳೆಯರ ಕೆಲ ತಂಡಗಳು ಕೈಗೆ ಗವುಸುಗಳನ್ನು ಧರಿಸಿ ಕಸವನ್ನು ಎತ್ತಿ ತಕ್ಷಣಕ್ಕೆ ಚೀಲವೊಂದಕ್ಕೆ ತುಂಬಿದರು. ನಂತರ ಆ ಚೀಲಗಳನ್ನು ಕಸ ವಿಲೇವಾರಿಗಾಗಿ ತರಿಸಿದ್ದ ಟ್ರ್ಯಾಕ್ಟ್‍ರ್‍ಗಳಿಗೆ ತುಂಬಿದರು. ಮೆರವಣಿಗೆಯನ್ನು ಹಿಂಬಾಲಿಸಿದ ಆ ಮಹಿಳೆಯರು ರಸ್ತೆ ಉದ್ದಕ್ಕೂ ಬಿದ್ದಿದ್ದ ಕಸವನ್ನೂ ಸುಡು ಬಿಸಿಲು ಲೆಕ್ಕಿಸದೇ ವಿಲೇವಾರಿ ಮಾಡಿದರು. ಇದು ಸುತ್ತಲೂ ನೆರೆದಿದ್ದ ಜನರ ಗಮನಸೆಳೆಯಿತು. ಮಹಿಳೆಯರ ಸ್ವಚ್ಛತಾ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.


ಹೂವಿನ ಸುರಿಮಳೆ :

ಸಿವಿಸಿಯವರಿಗೆ ಹೂವನ್ನು ಹಾಕಲು ಯುವಕರ ದಂಡೇ ನೆರೆದಿತ್ತು. ಆಝಾದ್ ವೃತ್ತದ ಹತ್ತಿರ ಎರಡು ಕ್ರೇನ್ ಬಳಸಿ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರವನ್ನು ಸಿವಿಸಿಯವರಿಗೆ ಹಾಕಿದರು. ನಂತರ ಎರಡು ಜೆಸಿಬಿ ಬಳಸಿ ಅವರ ಮೇಲೇ ಪುಷ್ಪಾರ್ಚನೆ ಮಾಡಿದರು. ಈ ನಡುವೆ ವಿಶೇಷ ವಾಹನದಲ್ಲಿದ್ದ ಸಿವಿಸಿಯವರಿಗೆ ಪ್ರತ್ಯೇಕ ಹೂವಿನ ಹಾರ ಹಾಕಲು ಸ್ಪರ್ದೆಯೇ ಏರ್ಪಟ್ಟಿತ್ತು.

Reported By : Shivakumar Hiremath



Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">