ಪ್ರಜಾಪ್ರಭುತ್ವ ಉಳಿವಿಗೆ ನಮ್ಮೊಂದಿಗೆ ಕೈಜೋಡಿಸಿ : ಹಿಟ್ನಾಳ
ಕೊಪ್ಪಳ,:ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವುಂಟಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಹಳೇಕನಕಾಪುರ, ಕನಕಾಪುರ ತಾಂಡಾ, ಹೊಸಕನಕಾಪುರ, ಬಸಾಪುರ, ಕುಟುಗನಹಳ್ಳಿ, ಕಿಡದಾಳ, ಬೆಳವಿನಾಳ ಗಿಣಿಗೇರಾ ಗ್ರಾಮದಲ್ಲಿ ಮತಯಾಚನೆ ನಡೆಸಿ, ಅವರು ಮಾತನಾಡಿದರು.
ರಾಜ್ಯದಲ್ಲಿ ವಾಮಮಾರ್ಗದಿಂದ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕಳೆದ ಮೂರು ವರ್ಷದಲ್ಲಿ ಯಾವುದೇ ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಲಿಲ್ಲ. ಹಿಂದಿನ ಮಾಜಿ ಸಿಎಂ ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ಜಾರಿಗೊಳಿಸಿದ ಅನೇಕ ಜನಪ್ರಿಯ ಯೋಜನೆಗಳನ್ನು ನಿಲ್ಲಿಸುವಂತ ಕೆಲಸ ಮಾಡಿದ್ದಾರೆ. ಕ್ಷೀರಭಾಗ್ಯ, ಶಾಲಾ ಮಕ್ಕಳಿಗೆ ಬೈಸಿಕಲ್, ಇಂದಿರಾ ಕ್ಯಾಂಟಿನ್, ಅನ್ನಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿ ಜನರನ್ನು ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಇವರು ಯಾವ ಆಧಾರದ ಮೇಲೆ ರಾಜ್ಯದಲ್ಲಿ ಅಧಿಕಾರ ನಡೆಸುತ್ತಾರೆ. ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಪರವಾಗಿರುವ ಪಕ್ಷ ಬೆಂಬಲಿಸಿದರೇ ಮಾತ್ರ ಸರಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುತ್ತವೆ. ಈಗಾಗಲೇ ಕ್ಷೇತ್ರದ 102 ಗ್ರಾಮದಲ್ಲಿ ಪ್ರಚಾರ ನಡೆಸಿದ್ದು ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಜನಪರ ಕಾರ್ಯಕ್ರಮಗಳು ಇಂದಿಗೂ ಜನರ ಮನದಲ್ಲಿ ನೆಲೆಯೂರಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.
ಶಾಶ್ವತ ಕುಡಿಯುವ ನೀರಿನ ಯೋಜನೆ ಸಾಕಾರ: ಕಳೆದ ಹತ್ತು ವರ್ಷಗಳ ಹಿಂದೆ ಕ್ಷೇತ್ರದ ಅನೇಕ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಉಲ್ಬಣಗೊಂಡಿದ್ದ ನೀರಿನ ಬವಣೆ ನಿವಾರಣೆಗೊಂಡಿದೆ. ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿಗಾಗಿ ಸಾವಿರಾರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದೇನೆ. ಬರದ ನಾಡಾಗಿದ್ದ ಕೊಪ್ಪಳವನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರು ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ . ಇಂತವರಿಗೆ ಮತದಾರರೇ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಕೊಪ್ಪಳದ ಸೂಟ್ ಕೇಸ್ ಪಾರ್ಟಿಗೆ ಮತ ಹಾಕಬೇಡಿ :
ಕೊಪ್ಪಳ ಕ್ಷೇತ್ರದಲ್ಲಿ ನೀರಾವರಿ, 371ಜೆ ಕಲಂ, ರೈತರಿಗಾಗಿ ಜೆಡಿಎಸ್ ಅಭ್ಯರ್ಥಿ ಯಾವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಸೂಟ್ ಕೇಸ್ ಇಡ್ಕೊಂಡು ಕೊಪ್ಪಳಕ್ಕೆ ಬಂದ ಸಿ.ವಿ. ಚಂದ್ರಶೇಖರ್ ಅವರು ಸೂಟ್ ಕೇಸ್ ನಲ್ಲಿ ಕ್ಷೇತ್ರದ ಜನತೆಗೆ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ವಲಸೆ ಬಂದಿರುವ ಅಭ್ಯರ್ಥಿಗೆ ಮತ ಹಾಕಬೇಡಿ. ಮೇ.10ರಂದು ನಡೆಯುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 5ರ ಹಸ್ತದ ಗುರುತಿಗೆ ಮತ ನೀಡಿ, ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯೆ ಜೆ.ಬಿ.ಮ್ಯಾಥರ್, ಮುಖಂಡರಾದ ಗೂಳಪ್ಪ ಹಲಗೇರಿ, ಕೃಷ್ಣರೆಡ್ಡಿ ಗಲಭಿ, ಬಾಲಚಂದ್ರನ್, ನವೋದಯ ವಿರುಪಣ್ಣ, ವೆಂಕನಗೌಡ್ರ ಹಿರೇಗೌಡ್ರ, ತೋಟಪ್ಪ ಕಾಮನೂರು, ನಾಗನಗೌಡ, ಕೆಎಂ ಸೈಯದ್,ಹನುಮಂತಪ್ಪ ಕಿಡದಾಳ, ಗಾಳೆಪ್ಪ ಪೂಜಾರ್, ಹನಮಂತಪ್ಪ ಜಲವರ್ಧನಿ, ಹನಮೇಶ್ ಹೊಸಳ್ಳಿ, ಮುದಿಯಪ್ಪ ಆದೋನಿ ಗ್ಯಾನಪ್ಪ ಬಸಾಪುರ, ಸುಬ್ಬಣ್ಣ ಆಚಾರ್, ನಾಗರಾಜ ಚಳ್ಳೊಳ್ಳಿ, ಮಲ್ಲು ಪೂಜಾರ್, ಗಿರೀಶ ಹಿರೇಮಠ, ಯಮನೂರಪ್ಪ ನಾಯಕ, ಕಿಶೋರಿ ಬೂದನೂರು, ಜ್ಯೋತಿ ಗೊಂಡಬಾಳ, ನಿಂಗಜ್ಜ ಶಹಾಪುರ, ರೇಷ್ಮಾ ಖಾಜಾವಲಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ವರದಿ : ಶಿವಕುಮಾರ ಹಿರೇಮಠ