- ಪ್ರಸಿದ್ಧ ಕಿನ್ನಾಳ ಕಲೆಯ ಗ್ರಾಮದಲ್ಲಿ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ
- ಮೇಣದ ಬತ್ತಿ ಬೆಳಗಿಸಿ, ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ
- ನಮ್ಮ ಮತ ನಮ್ಮ ಹಕ್ಕು ಸಂದೇಶ, ಸಹಿ ಅಭಿಯಾನ
- ಗ್ರಾಮೀಣ ಪ್ರದೇಶದ ಜನರಿಗೆ ಮತದಾನ ಸಂದೇಶ ರವಾನೆ ಹಿನ್ನೆಲೆ
ಕೊಪ್ಪಳ,: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ ವಿವಿಧೆಡೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ಮುಂದುವರೆದಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳವಾರ ದಂದು ಜಾಗತಿಕ ಪ್ರಸಿದ್ಧ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ
ಮತದಾನ ಜಾಗೃತಿ ಕಾರ್ಯಕ್ರಮವು ವಿಭಿನ್ನವಾಗಿ ನಡೆಯಿತು.
ಗ್ರಾಮದ ಬನಶಂಕರಿ ದೇವಾಲಯದ ಆವರಣದಲ್ಲಿ 'ನಮ್ಮ ಮತ ನಮ್ಮ ಹಕ್ಕು' ಎನ್ನುವ ಮತದಾನ ಜಾಗೃತಿ ಸಂದೇಶವನ್ನು
ಮೇಣದ ಬತ್ತಿ ಬೆಳಕಿನಲ್ಲಿ ರವಾನಿಸಿದ್ದು ವಿಶೇಷವಾಗಿತ್ತು.
ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಗ್ರಾಮಕ್ಕೆ ಆಗಮಿಸಿ ದೇವಸ್ಥಾನದ ಆವರಣದಲ್ಲಿ ಮೇಣದ ಬತ್ತಿ ಬೆಳಗಿಸಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಅಲ್ಲಿಂದ ಗ್ರಾಮ ಪಂಚಾಯತವರೆಗೆ ಮೊಂಬತ್ತಿ ಬೆಳಗಿಸಿ ಸಾಲಾಗಿ ಹೆಜ್ಜೆ ಹಾಕಿ ಜಾಗೃತಿ ಮೂಡಿಸಲಾಯಿತು. ಬಳಿಕ ಗ್ರಾಪಂ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಅವರು 'ತಪ್ಪದೇ ಮತದಾನ ಮಾಡಬೇಕು' ಎನ್ನುವ ಪ್ರತಿಜ್ಞಾವಿದಿ ಬೋಧಿಸಿದರು. ಬಳಿಕ ಮತದಾನ ಜಾಗೃತಿ ಹಿನ್ನೆಲೆಯಲ್ಲಿ ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಂತರ ಸಿಇಓ ಅವರು ಮಾತನಾಡಿ, ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನವು ನಮಗೆಲ್ಲರಿಗೂ ಸಂವಿಧಾನ ಬದ್ಧವಾಗಿ ದೊರೆತಿರುವ ಹಕ್ಕಾಗಿದೆ. ಮತದಾನ ದಿನದಂದು ಬಿಡುವು ಮಾಡಿಕೊಂಡು ಎಲ್ಲರೂ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ವರದಿ : ಶಿವಕುಮಾರ ಹಿರೇಮಠ
Tags
ಟಾಪ್ ನ್ಯೂಸ್