ಅಂಜನಾದ್ರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿಗೆ ಕರವೇ ಮನವಿ
ಕೊಪ್ಪಳ,: ಹನುಮ ಜನಿಸಿದ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕವು ಗುರುವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಹನುಮನ ಜನ್ಮ ಸ್ಥಳವೆಂದು ಸುಪ್ರಸಿದ್ಧಿ ಪಡೆದಿದ್ದು, ದೇಶಾದ್ಯಂತ ಹಲವು ಪ್ರಮುಖರು ಈ ಸ್ಥಳಕ್ಕೆ ಬೇಟಿ ನೀಡಿ ಹನುಮನ ದರ್ಶನ ಪಡೆದಿದ್ದಾರೆ. ಈ ಬೆಟ್ಟದಲ್ಲಿ ಪ್ರತಿ ಶನಿವಾರ ಅಪಾರ ಸಂಖ್ಯೆಯ ಭಕ್ತರು ಬರುತ್ತಿದ್ದು, ಈಗಾಗಲೇ ಬೇಸಿಗೆಯ ಸುಡುಬಿಸಿಲು ಪ್ರಖರವಾಗಿದ್ದು, ಬರಿಗಾಲಿನಲ್ಲಿ ಭಕ್ತರು ಬೆಟ್ಟ ಏರುವ ಭಾವನೆಯವರಾಗಿದ್ದಾರೆ. ಬೆಟ್ಟದ ಪ್ರವೇಶ ದ್ವಾರದಿಂದ ಬೆಟ್ಟ ಏರುವ ಪ್ರಾರಂಭ ಹಂತದವರೆಗೂ ಕನಿಷ್ಠ ನೆರಳಿನ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಿಲ್ಲದೇ ಇರುವುದು ಖೇಧಕರ. ಬೆಟ್ಟ ಏರುವಲ್ಲಿ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ತುಂಬಾ ಹರಸಾಹಸ ಪಡೆತ್ತಿದ್ದಾರೆ.
ಬರಿಗಾಲಿನಲ್ಲಿಯೇ ಬೇಸಿಗೆಯ ಸುಡು ಬಿಸಿಲಿನಲ್ಲಿ ಬೆಟ್ಟ ಏರುವುದು ಬಹಳ ಕಠಿಣವಾಗುತ್ತಿದೆ. ಬೆಟ್ಟದ ಅರ್ಧಕ್ಕೆ ನೆರಳಿನ ಹೊದಿಕೆ ಇದ್ದರೂ ಕೂಡಾ ಇನ್ನೂ ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಬೆಟ್ಟದ ಮೇಲೆ ದರ್ಶನದ ಬಳಿಕ ಸ್ವಲ್ಪ ಸಮಯ ವಿರಮಿಸಲು ಕನಿಷ್ಠ ನೆರಳಿನ ವ್ಯವಸ್ಥೆಯೂ ಇಲ್ಲದೇ ಇರುವುದು ಮೂಲಭೂತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ ಎಂದರು. ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟರೂ ಕೂಡಾ ತ್ವರಿತವಾಗಿ ಕಾಮಗಾರಿಯನ್ನು ಕೈಗೊಳ್ಳುಲು ಸಾಧ್ಯವಾಗದೇ ಇರುವುದು ಶೋಚನೀಯವಾಗಿದೆ. ಆದಕಾರಣ ಬೇಸಿಗೆ ಸಮಯವಾದ್ದರಿಂದ ಕೂಡಲೇ ಬೆಟ್ಟ ಏರುವ ಪ್ರದೇಶದಿಂದ ನೆಲಹಾಸನ್ನು ಹಾಕಿ, ಬೆಟ್ಟದ ಮೇಲೆ ನೆರಳಿನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಈ ವೇಳೆ ಕರವೇ ಯುವ ಘಟಕ ಜಿಲ್ಲಾಧ್ಯಕ್ಷ ಹನುಮಂತ ಬೆಸ್ತರ, ತಾಲೂಕಾ ಪ್ರಧಾನಕಾರ್ಯದರ್ಶಿ ನಿಂಗಪ್ಪ ಮೂಗಿನ್, ಯುವ ಘಟಕ ತಾಲೂಕಾಧ್ಯಕ್ಷ ವಿನಾಯಕ ತಿಪ್ಪಣ್ಣವರ, ಗೊಂಡಬಾಳ ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ ನಾಗರಳ್ಳಿ ಸೇರಿದಂತೆ ಅನೇಕರು ಇದ್ದರು.
ವರದಿ : ಶಿವಕುಮಾರ ಹಿರೇಮಠ