Koppal : ತೆಂಗು ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಜ್ಞಾನಿಗಳಿಂದ ಸಲಹೆಗಳು

ತೆಂಗು ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಜ್ಞಾನಿಗಳಿಂದ ಸಲಹೆಗಳು

ಕೊಪ್ಪಳ,: ಬೇಸಿಗೆ ಹಂಗಾಮು ಶುರುವಾಯಿತೆಂದರೆ ಎಳನೀರಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಉತ್ತಮ ಎಳನೀರು ಕಾಯಿಗೆ ರೂ.30 ರಿಂದ 40 ಮಾರುಕಟ್ಟೆ ದರ ಇದೆ. ರೈತರೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಿದರೆ ಉತ್ತಮ ಲಾಭ ಇದೆ. ಇತ್ತೀಚೆಗೆ ಎಳನೀರಿನಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಪೋಟ್ಯಾಶ್ ಮತ್ತು ಕೆಲವು ಖನಿಜಗಳ ಲಭ್ಯತೆ ಬಗ್ಗೆ ಕೊರೋನಾ ಕಾಲದಿಂದಲೂ ಗ್ರಾಹಕರಲ್ಲಿ ಅರಿವು ಹೆಚ್ಚಿದ್ದು, ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕೇಂದ್ರಕ್ಕೆ ಅನೇಕ ಜನ ರೈತರು ಅಡಿಕೆ, ತಾಳೆ ಬಗ್ಗೆ ಮಾಹಿತಿ ಕೇಳಲು ಬರುತ್ತಾರೆ. ಅವರಿಗೆಲ್ಲ ಈ ಕೇಂದ್ರದಿಂದ ತೆಂಗು ಅದರಲ್ಲೂ ಎಳನೀರು ತಳಿ ಬೆಳೆಯಲು ಪ್ರೋತ್ಸಾಹ ಹಾಗೂ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ. ತೆಂಗು ಒಂದು ಕಲ್ಪವೃಕ್ಷ ಬೆಳೆಯಾಗಿದ್ದು ತೆಂಗಿನ ಎಲ್ಲ ಅಂಗಗಳು, ಅಂದರೆ ಎಲೆ, ಗರಿ, ತೊಗಟೆ, ಹೂ (ಹೊಂಬಾಳೆ) ಎಳನೀರು ಕಾಯಿ, ಗೊರಟೆ ಕೂಡ ಪ್ರಯೋಜನಕಾರಿಯಾಗಿದ್ದು, ಹೆಚ್ಚಿನ ಆದಾಯ ನೀಡಬಲ್ಲದು. ತೆಂಗಿನ ಐಸಕ್ರೀಮ್, ತೆಂಗಿನ ಎಣ್ಣೆ ಹೀಗೆ ತೆಂಗಿನ ಸಂಸ್ಕರಿಸಿದ ಉತ್ಪನ್ನ ಹಾಗೂ ಉಪ ಉತ್ಪನ್ನಗಳು ಆದಾಯ ಹೆಚ್ಚಿಸುವ ಮೂಲ ಆಗಿವೆ. ಆದ್ದರಿಂದ ಒಂದು ಎಕರೆ ಜಮೀನಿರುವವರು ಕನಿಷ್ಠ 25 ತೆಂಗಿನ ಗಿಡಗಳನ್ನು ನಾಟಿ ಮಾಡಿದಲ್ಲಿ ಬೇಸಿಗೆಯಲ್ಲಿ ಉತ್ತಮ ಆದಾಯ ಪಡೆದುಕೊಳ್ಳಬಹದು. ಒಂದು ಗಿಡದಿಂದ ಉತ್ತಮ ನಿರ್ವಹಣೆಯಿಂದ ರೂ.3000 /- ದಿಂದ 5000/- ಆದಾಯ ಪಡೆದುಕೊಳ್ಳಬಹುದು. ಮೌಲ್ಯವರ್ಧನೆ ಮಾಡಿ ರೂ.10,000/- ಆದಾಯವನ್ನು 10 ವರ್ಷ ಮೇಲ್ಪಟ್ಟ ಪ್ರತಿ ಗಿಡದಿಂದ ಪಡೆದುಕೊಳ್ಳಬಹುದು. ಇಂತಹ ಕಲ್ಪವೃಕ್ಷಕ್ಕೆ ಬೇಸಿಗೆಯಲ್ಲಿ ನೀರು, ಪೋಷಕಾಂಶಗಳಿಲ್ಲದೇ ಕೀಟ/ರೋಗಗಳ ನಿರ್ವಹಣೆ ಬಗ್ಗೆ  ಕೃಷಿ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ, ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಅವರು ಕೊಪ್ಪಳ ಜಿಲ್ಲೆಯ ರೈತರಿಗೆ ಕೆಲವು ಸಲಹೆ ನೀಡುತ್ತಾರೆ. ಬೇಸಿಗೆಯಲ್ಲಿ ನೀರಿನ ನಿರ್ವಹಣೆ ಅತಿ ಮುಖ್ಯ ಆಗಿರುವುದರಿಂದ ಪ್ರತಿ ತೆಂಗಿನ ಗಿಡದ ಸುತ್ತಲೂ 5-6 ಅಡಿ ಪಾತಿ ಮಾಡಿ 150 ಲೀ ನೀರನ್ನು ಪ್ರತಿ ದಿನ ಒದಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸುತ್ತಲೂ ನೀರು ಹರಿದು ಹೋಗದೇ ಇಂಗುವಂತೆ. ಚೌಕಾಕಾರ ಅಥವಾ ದುಂಡನೆ ಅಥವಾ ಚಂದ್ರಾಕೃತಿ ಪಾತಿ ಮಾಡಬೇಕು. ಹನಿ ನೀರಾವರಿ ಅತ್ಯಂತ ಸೂಕ್ತ. ನಿಮ್ಮ ಜಮೀನು ಹೇಗೆ ಇದ್ದರೂ ತೆಂಗು ನಾಟಿ ಮಾಡುವಾಗ 4x4 ಘನ ಅಡಿ ಗುಂಡಿ ಮಾಡಿ 1:1 ಮರುಳು, ಕೆಂಪು ಮಣ್ಣು ತುಂಬಿಸಿ ನಾಟಿ ಮಾಡಬೇಕು. ಗಿಡದ ಹತ್ತು ಅಡಿ ಸುತ್ತಳತೆಯಲ್ಲಿ ಯಾವುದೇ ನೆರಳು ಬೀಳದಂತೆ ನೋಡಿಕೊಳ್ಳಬೇಕು. ಬೇರುಗಳ ಉತ್ತಮ ಬೆಳವಣಿಗೆಗೆ 5-6 ಅಡಿ ಸುತ್ತಲೂ ಖಾಲಿ ಜಾಗ ಇರಬೇಕು. ಬಡ್ಡೆಗೆ ಯಾವುದೇ ಗಾಯ, ಭೌತಿಕ ಒತ್ತಡ ಉಂಟಾಗದಂತೆ ನೋಡಿಕೊಳ್ಳಬೇಕು. 

ಪ್ರತಿ ವರ್ಷಕ್ಕೆ ಎರಡು ಸಾರಿ ಶಿಫಾರಿತ ಪ್ರಮಾಣದ ಕೊಟ್ಟೆಗೆ ಗೊಬ್ಬರ, ಬೇವಿನ ಹಿಂಡಿ ಜೊತೆಗೆ ರಾಸಾಯನಿಕ ಗೊಬ್ಬರಗಳ ಮಿಶ್ರಣ ಮತ್ತು ಲಘು ಪೋಷಕಾಂಶಗಳಾದ ಮ್ಯಾಂಗನೀಸ್ ಮ್ಯಾಗ್ನೆಷಿಯಂ, ಕಬ್ಬಿಣದ ಸಲ್ಫೇಟ್ ಅಲ್ಲದೇ ಜಿಂಕ್, ಬೋರಾನಗಳ ಮಿಶ್ರಣ ಒದಗಿಸಬೇಕು. ಬೇಸಿಗೆಯಲ್ಲಿ ಪ್ರಮುಖ ಕೀಟಗಳೆಂದರೆ ಎಲೆ ತಿನ್ನುವ ಕೀಟ : ಇದು ಎಲ್ಲ ಸಮಯದಲ್ಲೂ ತೆಂಗಿನ ಗಿಡದ ಮೇಲೆ ಹಾವಳಿ ಮಾಡುತ್ತದೆ. ಎಲೆಗಳಲ್ಲಿನ ರೇಷ್ಮೇ ಜಾಡಿನಲ್ಲಿ ಕುಳಿತು ಎಲೆ ಕೆರೆದು ರಸ ಹೀರುತ್ತವೆ. ಆಗ ಎಲೆಗಳ ಮೇಲೆ ಒಣಗಿದ ಮಚ್ಚೆಗಳಾಗುತ್ತವೆ. ನಂತರ ಇದರ ಹಿಕ್ಕೆ ಹಾಗೂ ಗಿಡದ ಪದಾರ್ಥಗಳು ಎಲೆಗಳಲ್ಲಿ ಕಂಡು ಬರುತ್ತವೆ. ದೂರದಿಂದ ಎಲೆ ಸುಟ್ಟಂತೆ ಕಾಣುತ್ತದೆ. ರೈನೋಸೆರಾಪ್ ದುಂಬಿ : ಇದು ಸುಳಿ, ಎಲೆ ಕಾಂಡಗಳನ್ನು ಕೊರೆದು ತಿನ್ನುತ್ತದೆ. ಹಾನಿಗೊಂಡ ಭಾಗದಲ್ಲಿ ನಾರಿನ ಅಂಶ ಎದ್ದು ಕಾಣುತ್ತದೆ ಮತ್ತು ಗರಿಗಳಲ್ಲಿ ಎಲೆಗಳು ವಜ್ರಾಕಾರವಾಗಿ ಕತ್ತರಿಸಿದಂತೆ ಕಾಣುತ್ತದೆ. 

ಕೆಂಪು ತಲೆ ಹುಳು : ಗಿಡದ ಬಡೆಯೊಳಗೆ ತಿರುಳುನ್ನು ಮೇಯುತ್ತದೆ ಬಡ್ಡೆಗೆ ಕಿವಿಗೊಟ್ಟು ಆಲಿಸಿದರೆ ತಿರುಳು ಜಗಿಯುವ ಶಬ್ದ ಕೇಳಿ ಬರುತ್ತದೆ. ಕೆಂಪು ನುಸಿ : ಇವು ಕಾಯಿಗಳಿಂದ ರಸಹೀರಿ ಅಂಟು ಪದಾರ್ಥವನ್ನು ಒಸರುತ್ತವೆ. ಇದರಿಂದಾಗಿ ಕಾಯಿಗಳ ಮೇಲೆ ತ್ರಿಕೋಣಾಕೃತಿ ಬಿಳಿ ಮಚ್ಚೆಗಳಾಗಿ ಬಿರುಕು ಬಿಡುತ್ತದೆ. ಇದರಿಂದಾಗಿ ಗುಣಮಟ್ಟ ಕುಸಿದು ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾಗುತ್ತದೆ. ಹತೋಟಿ ಕ್ರಮಗಳಲ್ಲಿ ಮುಖ್ಯವಾಗಿ ಪೋಷಕಾಂಶಗಳ ನಿರ್ವಹಣೆ ಅದರಲ್ಲೂ ಪೋಟ್ಯಾಷ್‍ಯುಕ್ತ ರಸಗೊಬ್ಬರಗಳನ್ನು ಬಳಸಬೇಕು. ನೀರಿನಲ್ಲಿ ಕರಗುವ ಗಂಧಕ, ಬೇವಿನ ಎಣ್ಣೆ ಅಲ್ಲದೇ ಮೈಟ್ ನುಸಿನಾಶಕಗಳನ್ನು ತಜ್ಞರ ಸಲಹೆಯಂತೆ ಬಳಸಬೇಕು. ಈ ಕೀಟಗಳ ಹತೋಟಿಗೆ ಮೋಹಕ ಬಲೆಯ ಅಳವಡಿಕೆ ಅತೀ ಪರಿಣಾಮಕಾರಿ. ಅಲ್ಲದೇ ಪರಬಕ್ಷ ಕೀಟಗಳ ಬಳಕೆ ಕೂಡ ಮುಖ್ಯ ಅಲ್ಲದೇ ಕೀಟನಾಶಕಗಳಾದ ಬೇವಿನ ಎಣ್ಣೆ, ಮೆಲಾಥಿಯಾನ್ 50 ಇ.ಸಿ.,ಇತ್ಯಾದಿಗಳನ್ನು ಸಿಂಪರಣೆ ಅಲ್ಲದೇ ಬೇರಿನ ಮೂಲಕ ಕೊಡುವುದೂ ಪ್ರಮುಖ ಹತೋಟಿ ಕ್ರಮಗಳಾಗಿವೆ. ಮುಖ್ಯ ರೋಗಗಳಾದ ಹೊಂಬಾಳೆ ಒಣಗುವುದು, ಕಾಂಡ ಸೋರುವುದು ಮತ್ತು ಸುಳಿಕೊಳೆ ರೋಗ ಇತ್ಯಾದಿ ರೋಗಗಳ ಹತೋಟಿಗೆ ಮುಖ್ಯವಾಗಿ ಗಾಳಿ-ಬೆಳಕು ಆಡುವಂತೆ ನೋಡಿಕೊಳ್ಳವುದಲ್ಲದೇ ಉತ್ತಮ ನೀರು, ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ ಬೋರ್ಡೊ ಮಿಶ್ರಣ ಮನೆಯಲ್ಲಿ ತಯಾರಿಸಿ ಬಳಸುವುದು ಕಡಿಮೆ ಖರ್ಚಿನಲ್ಲಿ ರೋಗಗಳ ಹತೋಟಿ ಸಾಧ್ಯ. ಮಾರುಕಟ್ಟೆಯಲ್ಲಿ ದೊರೆಯುವ ಸಿ.ಓ.ಸಿ., ಕಾರ್ಬೆಂಡಾಜಿ ಮ್ಯಾಂಕೋಜೆಬ್ ನಂತಹ ರಾಸಾಯನಿಕಗಳನ್ನು ಬಳಸಲು ಕೃಷಿ ವಿಜ್ಞಾನ ಕೇಂದ್ರ, ಕೊಪ್ಪಳದ ವಿಜ್ಞಾನಿಗಳನ್ನು ಸಂಪರ್ಕಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ., ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">