ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ : ಮನೆ ಮಗಳೆಂದು ಭಾವಿಸಿ ಮತ ಹಾಕಿ: ಮಂಜುಳಾ ಕರಡಿ
ಕೊಪ್ಪಳ,: ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ತಮ್ಮ ಮನೆ ಮಗಳೆಂದು ಮತ ಹಾಕುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಕೊಪ್ಪಳ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರು ಮನವಿ ಮಾಡಿದರು.
ತಾಲೂಕಿನ ಚುಕ್ಕನಕಲ್ಲು, ಬಹದ್ದೂರ್ ಬಂಡಿ, ಗೊಂಡಬಾಳ ಸೇರಿದಂತೆ ಅನೇಕ ಗ್ರಾಮದಲ್ಲಿ ಬಿಜೆಪಿ ಪರ ಮತಯಾಚನೆ ನಡೆಸಿದ ಅವರು ಮಾತನಾಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರ ಆಶೀರ್ವಾದ ದಿಂದ ವಿಧಾನಸಭೆಗೆ ಆರಿಸಿ ಕಳುಹಿಸಿ ಎಂದರು.
ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ರಸ್ತೆ, ಕುಡಿವ ನೀರು, ಶೌಚಾಲಯ ಸೇರಿ ಮೂಲಸೌಕರ್ಯ ಸಮಸ್ಯೆ ಎದ್ದುಕಾಣುತ್ತಿದೆ. ದಶಕದಿಂದ ಆಡಳಿತ ನಡೆಸಿದ ಶಾಸಕರು ಸಮಸ್ಯೆ ಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವುದು ಕಂಡು ಬರುತ್ತಿದೆ. ಆದ್ದರಿಂದ ಜನತೆ ಬಿಜೆಪಿಗೆ ಅವಕಾಶ ನೀಡಬೇಕು. ಜನರ ಆಶೀರ್ವಾದದಿಂದ ಶಾಸಕಿಯಾದರೆ, ಗ್ರಾಮಗಳ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಅಗತ್ಯವಿದೆ. ಶೌಚಾಲಯ, ಕುಡಿಯುವ ನೀರಿನ ಟ್ಯಾಂಕಿ ನಿರ್ಮಾಣ ಮಾಡಬೇಕಿದೆ. ಇದಕ್ಕೆ ನೂರಾರು ಕೋಟಿ ರೂ. ಅನುದಾನ ಅಗತ್ಯವಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಶಾಲಾ ಕೊಠಡಿ ದುರಸ್ತಿ ಹಾಗೂ ನಿರ್ಮಾಣ ಮಾಡಲಾಗುವುದು ಎಂದರು.
ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಬೇರೂರಿವೆ. ರಾಜ್ಯದಲ್ಲಿ ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿ ಹೊಂದಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ತನ್ನಿ, ಕೊಪ್ಪಳದ ಎಲ್ಲ ಸಮಸ್ಯೆ ಪರಿಹರಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಕಳೆದ ಹತ್ತು ವರ್ಷದಿಂದ ಕಾಂಗ್ರೆಸ್ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರನ್ನು ಸೋಲಿಸುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು. ಕ್ರಮ ಸಂಖ್ಯೆ 4ಕ್ಕೆ ತಮ್ಮ ಅಮೂಲ್ಯ ಮತ ಹಾಕಿ ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿದಾನ ಪರಿಷತ್ತ ಸದಸ್ಯೆ ಹೇಮಲತಾ ನಾಯಕ, ನಗರಾಭಿವೃದ್ಧಿ ಅಧ್ಯಕ್ಷ ಮಹಾಂತೇಶ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ್ ಹಿಟ್ನಾಳ, ಮಹಿಳಾ ಜಿಲ್ಲಾದ್ಯಕ್ಷರಾದ ವಾಣಿಶ್ರೀ ಮಠದ, ಮುಖಂಡರಾದ ಗಣೇಶ ಹೊರತಟ್ನಾಳ, ಬಸವರಾಜ ಬೋವಿ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಮಧುರಾ ಕರ್ಣಂ, ಮಹಾಲಕ್ಷ್ಮಿ ಕಂದಾರಿ ಸೇರಿದಂತೆ ಹಲವು ಮುಖಂಡರು, ನೂರಾರು ಕಾರ್ಯಕರ್ತರು, ಗ್ರಾಮದ ಹಿರಿಯರು, ತಾಯಂದಿರು ಇದ್ದರು.
ವರದಿ : ಶಿವಕುಮಾರ ಹಿರೇಮಠ