ಎ.24 ಅಥವಾ 25ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್
*******************************
ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಅಂಕಗಳ ಕೂಡಿಕೆ ಕಾರ್ಯ ಪೂರ್ಣಗೊಂಡಿದ್ದು ಏಪ್ರಿಲ್ 24 ಅಥವಾ 25ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಮೂಲಗಳು ತಿಳಿಸಿವೆ.
ರಾಜ್ಯದ 1,109 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆದಿದ್ದವು. ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೇ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡು ಮೌಲ್ಯಮಾಪನ ಕಾರ್ಯವನ್ನು ಮಂಡಳಿ ಸುಸೂತ್ರವಾಗಿ ಪೂರ್ಣಗೊಳಿಸಿದೆ.
ಪ್ರತಿ ವಿಷಯದಲ್ಲಿ ಬಹು ಆಯ್ಕೆ ಸೇರಿದಂತೆ ಒಂದು ಅಂಕದ 20 ಪ್ರಶ್ನೆಗಳನ್ನು ಇದೇ ಮೊದಲ ಬಾರಿ ಪರಿಚಯಿಸಲಾಗಿತ್ತು. ರಸಾಯನ ವಿಜ್ಞಾನ ಹೊರತುಪಡಿಸಿ, ಉಳಿದ ಪತ್ರಿಕೆಗಳ ಕುರಿತು ಯಾವುದೇ ತಕರಾರು ಬಂದಿರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನ ವಿಷಯದ ಪ್ರಶ್ನೆಗಳು ತೊಡಕಾಗಿವೆ. ಸಿಬಿಎಸ್‌ಸಿ, ಐಸಿಎಸ್‌ಸಿ ಮಾದರಿ ಯಲ್ಲಿ ಪ್ರಶ್ನೆಗಳಿವೆ ಎಂದು ಕೆಲವರು ಮಂಡಳಿಗೆ ದೂರು ಸಲ್ಲಿಸಿದ್ದರು.