ಯಲಬುರ್ಗಾ : ಹಾಲಪ್ಪ ಆಚಾರ್, ನವೀನ್ ಕುಮಾರ್ ಗುಳಗಣ್ಣನವರ್ ಜೊತೆ ಜೊತೆಗೆ ಈಗ ಯಲಬುರ್ಗಾ ಬಿಜೆಪಿ ಟಿಕೆಟ್ ಗೆ ಮತ್ತೊಬ್ಬರು ತೀವ್ರ ಪೈಪೋಟಿ ಒಡ್ಡಿದ್ದು ಟಿಕೆಟ್ ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಬಿಜೆಪಿ ಮುಖಂಡ, ಪಂಚಮಸಾಲಿ ಸಮುದಾಯದ ನಾಯಕ ಕಳಕನಗೌಡ ಪಾಟೀಲ್ ಕಲ್ಲೂರ್ ಯಲಬುರ್ಗಾ ಕ್ಷೇತ್ರದ ಟಿಕೆಟ್ ತಮಗೆ ಕೊಡಿ ಎಂದು ಬಿಜೆಪಿ ಪಕ್ಷದ ವರಿಷ್ಟರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗಂಗಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಳಕನಗೌಡ ಪಾಟೀಲ್, ಪಕ್ಷಕ್ಕಾಗಿ ನಾನೂ ಕೂಡಾ ನಿಷ್ಠೆಯಿಂದ ದುಡಿದ್ದೇನೆ, ಜೊತೆಗೆ ಯಲಬುರ್ಗಾ ಕ್ಷೇತ್ರದಲ್ಲಿ 45 ರಿಂದ 50 ಸಾವಿರದಷ್ಟು ಲಿಂಗಾಯತ ಪಂಚಮಸಾಲಿ ಮತದಾರರಿದ್ದಾರೆ, ಇದರ ಜೊತೆಗೆ ಇತರ ಜನಾಂಗದ ನಾಯಕರು ಕಾರ್ಯಕರ್ತರು ಕೂಡಾ ನನ್ನನ್ನು ಸ್ಪರ್ದಿಸಲು ಹೇಳುತ್ತಿದ್ದಾರೆ. ಬಿಜೆಪಿ ಪಕ್ಷವು ನನಗೆ ಯಲಬುರ್ಗಾ ದಿಂದ ಟಿಕೆಟ್ ಕೊಟ್ಟರೆ ಖಂಡಿತ ಗೆಲುವು ನನ್ನದೇ ಎಂದಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಕೇಂದ್ರದ ಮಾಜಿ ಸಚಿವ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮೂಲಕ ಟಿಕೆಟ್ ಗಿಟ್ಟಿಸಲು ಕಳಕನಗೌಡ ಅವರು ತೀವ್ರ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
ಇದಕ್ಕೆಲ್ಲಾ ಜಾತಿ ಸಮೀಕರಣ ಲೆಕ್ಕಾಚಾರ ಎನ್ನಲಾಗುತ್ತಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಪಂಚಮಸಾಲಿ ಎರಡನೇ ದೊಡ್ಡ ಸಮುದಾಯವಾಗಿದ್ದು 45 ಸಾವಿರದಷ್ಟು ಮತದಾರರಿದ್ದಾರೆ.
ಈ ಹಿಂದೆ ಯಲಬುರ್ಗಾ ತಾಲೂಕಿನ. ಮುಧೋಳದಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಬಹಿರಂಗ ವೇದಿಕೆಯಲ್ಲಿ ಕಳಕನಗೌಡ ಪಾಟೀಲ್ ಅವರ ಸ್ಪರ್ಧೆ ಬಗ್ಗೆ ಯತ್ನಾಳ್ ಹೇಳಿದ್ದರು.
ಸರಳ, ಸಜ್ಜನ, ಸಮಾಜ ಸೇವೆಯ ಮೂಲಕ ಎಲ್ಲಾ ಸಮಾಜದ ವಿಶ್ವಾಸ ಗಳಿಸಿರುವ ಕಳಕನಗೌಡ ಪಾಟೀಲ್ ಅವರಿಗೆ ಟಿಕೆಟ್ ಸಿಕ್ಕರೆ ಗೆಲ್ಲುವ ವಿಶ್ವಾಸವಿದೆ ಎಂದು ಪಂಚಮಸಾಲಿ ಸಮಾಜದ ಇತರ ನಾಯಕರು ಕೂಡಾ ಹೇಳುತ್ತಿದ್ದಾರೆ.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ