ಕುಕನೂರು : ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ ಜನತೆ ತತ್ತರಿಸಿದ್ದಾರೆ, ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ ಟ್ರಬಲ್ ಇಂಜಿನ್ ಸರ್ಕಾರ, ಜನರಿಗೆ ತೊಂದರೆ ಕೊಡುವ ಸರ್ಕಾರ ಬಿಜೆಪಿ ಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಹೇಳಿದರು.
ಅವರು ಸೋಂಪುರ, ಮಾಳೆಕೊಪ್ಪ, ಮನ್ನಾಪುರ, ಇಟಗಿ ಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಯರಡ್ಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ ಜನರು ಕಷ್ಟ ಪಡುವಂತಾಗಿದೆ, ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆರಿದೆ, ರೈತರಿಗೆ ಗೊಬ್ಬರದ ಅಭಾವ ಕಾಡುತ್ತಿದೆ,ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಈಗ ಜನತೆಗೆ ಟ್ರಬಲ್ ಇಂಜಿನ್ ಸರ್ಕಾರವಾಗಿದೆ, ಮುಂದೆಯೂ ತೊಂದರೆ ತಪ್ಪಿದ್ದಲ್ಲ, ಟ್ರಬಲ್ ಇಂಜಿನ್ ಸರ್ಕಾರ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಹೇಳಿದರು.
ಸ್ಥಳೀಯವಾಗಿ ಹಾಲಪ್ಪ ಆಚಾರ್ 6 ವರ್ಷ ಎಂ ಎಲ್ ಸಿ ಯಾಗಿ,5 ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ಏನೂ ಅಭಿವೃದ್ಧಿ ಮಾಡಲಿಲ್ಲ, ಹಾಲಪ್ಪ ಅವರಿಂದ ಯಲಬುರ್ಗಾ ಕುಕನೂರು ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆ ಮಾಡಿದರು, ಹೀಗಾಗಿ ಮುಂದಿನ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕ್ಷೇತ್ರದಲ್ಲಿ ಇನ್ನೂ ಉತ್ತಮ ಅಭಿವೃದ್ಧಿ ಕೆಲಸ ಮುಂದುವರೆಸುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರಡ್ಡಿ ಹೇಳಿದರು.
ಈ ಸಲ ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರದಲ್ಲಿ ಸುಮಾರು ಅರವತ್ತು ಕೆರೆ ತುಂಬಿಸುವೆ, ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಕಟ್ಟಿಸುತ್ತೇವೆ, ಜೊತೆಗೆ ಬಡವರಿಗೆ ಹತ್ತು ಕೆಜಿ ಉಚಿತ ಅಕ್ಕಿ, ಪ್ರತೀ ಕುಟುಂಬಕ್ಕೆ ಆರ್ಥಿಕ ಸಹಾಯ, ಉಚಿತ ವಿದ್ಯುತ್ ಘೋಷಣೆಯನ್ನು ಜಾರಿಗೆ ತರುತ್ತೇವೆ ಹೀಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ರಾಯರಡ್ಡಿ ಹೇಳಿದರು.
ಪ್ರಚಾರ ಕಾರ್ಯಕ್ರಮದಲ್ಲಿ ಕುಕನೂರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚೆಂಡೂರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ, ವೀರನಗೌಡ ಪಾಟೀಲ್ ಬಳೂಟಗಿ, ಮಂಜುನಾಥ್ ಕಡೆಮನಿ, ಮೇಘರಾಜ್ ಬಳಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.