ಗೆಲ್ಲುವ ಗ್ಯಾರಂಟಿಯೊಂದಿಗೆ ಚುನಾವಣೆ ಪ್ರಚಾರಕ್ಕಿಳಿದ ಅಭ್ಯರ್ಥಿಗಳು
ಯಲಬುರ್ಗಾ : ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ.
ಪ್ರಸ್ತುತ ಯಲಬುರ್ಗಾ ವಿಧಾನಸಭಾ ಚುನಾವಣೆ ಅಖಾಡದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಪಕ್ಷದಿಂದ ಹಾಲಿ ಸಚಿವರಾದ ಹಾಲಪ್ಪ ಆಚಾರ್, ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವರಾದ ಬಸವರಾಜ್ ರಾಯರಡ್ಡಿ ಅವರು ಕಣದಲ್ಲಿದ್ದು ಇಬ್ಬರ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟ್ಟಿದೆ.
ಇದರ ಮದ್ಯೆ ಎನ್ ಸಿ ಪಿ ಅಭ್ಯರ್ಥಿ ಆರ್ ಹರೀಶ್ ಅವರು ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಜೊತೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲನಗೌಡ ಕೋನನಗೌಡರ್ ಕೂಡಾ ಪಕ್ಷ ಸಂಘಟನೆ, ಪ್ರಚಾರವನ್ನು ಜೋರಾಗಿ ನಡೆಸಿದ್ದಾರೆ.
ಉಳಿದಂತೆ ಆಮ್ ಆದ್ಮಿ ಪಕ್ಷದಿಂದ ಪತ್ರಕರ್ತ ಮೌಲಾಹುಸೇನ್ ಬುಲ್ದಿಯಾರ್ ಉಮೇದುವಾರರಾಗಿದ್ದರೆ, ಇನ್ನುಳಿದಂತೆ ಪಕ್ಷೇತರ ಅಭ್ಯರ್ಥಿಗಳು ಮತ ಸೆಳೆಯಲು ಚುನಾವಣೆ ಕಣಕ್ಕೆ ಧುಮುಕಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಜನಾರ್ಧನ್ ರೆಡ್ಡಿ ಅವರ ಕೆ ಆರ್ ಪಿ ಪಿ ಪಕ್ಷದಿಂದ ಯಾವೊಬ್ಬ ಅಭ್ಯರ್ಥಿ ನಿಲ್ಲದಿರುವುದು ರಾಷ್ಟೀಯ ಪಕ್ಷದ ಅಭ್ಯರ್ಥಿಗಳಿಗೆ ಒಳ ಏಟಿನ ಭೀತಿ ತಪ್ಪಿದೆ.
ಮೇಲ್ನೋಟಕ್ಕೆ ಬಿಜೆಪಿ ವರ್ಸೆಸ್ ಕಾಂಗ್ರೆಸ್ ಮದ್ಯೆ ತೀವ್ರ ಸ್ಪರ್ಧೆ ಇದ್ದು, ಎನ್ ಸಿ ಪಿ, ಜೆಡಿಎಸ್ ಅಭ್ಯರ್ಥಿಗಳು ನಿರ್ಣಾಯಕರೆನಿಸಿದ್ದಾರೆ. ಚುನಾವಣೆಗೂ ಮುಂಚಿನಿಂದಲೂ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ಪಕ್ಷ ಸಂಘಟನೆ ಮಾಡಿರುವ ಎನ್ ಸಿ ಪಿ ಅಭ್ಯರ್ಥಿ ಆರ್ ಹರೀಶ್ ಕೂಡಾ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಮಲ್ಲನಗೌಡ ಕೂಡಾ ಪಕ್ಷದ ಅಜೆಂಡಾದೊಂದಿಗೆ ಪ್ರಚಾರ ಮಾಡುತ್ತಿದ್ದು ಗೇಲಿವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಮತ್ತು ಮಾಜಿ ಮಂತ್ರಿಗಳ ಚುನಾವಣೆ ಪ್ರಚಾರ ಕ್ಷೇತ್ರದಲ್ಲಿ ಜೋರಾಗಿ ನಡೆದಿದ್ದು ಸೋಮವಾರದಿಂದ ಅಭ್ಯರ್ಥಿಗಳ ಚುನಾವಣೆ ಪ್ರಚಾರ ಮತ್ತಷ್ಟು ಚುರುಕುಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಲಿದ್ದು ಚುನಾವಣೆ ಪ್ರಚಾರ ಮತ್ತಷ್ಟು ತೀವ್ರತೆ ಪಡೆಯಲಿದೆ.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ