ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳ 10% ಶುಲ್ಕ ಹೆಚ್ಚಳ ನಿರ್ಧಾರವನ್ನು ಎಐಡಿಎಸ್‌ಓ ಉಗ್ರವಾಗಿ ಖಂಡಿಸುತ್ತದೆ.- ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿಕೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳಿಗೆ 10% ಶುಲ್ಕ ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನು ಎಐಡಿಎಸ್ಓ ರಾಜ್ಯ ಸಮಿತಿಯು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ.
2021 ರಲ್ಲಿ ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜೊತೆಗೆ ಖಾಸಗಿ ಕಾಲೇಜುಗಳು ಸಭೆ ನಡೆಸಿ, ಪ್ರತೀ ವರ್ಷ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳು ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಶೇ.10 ರಷ್ಟು ಹೆಚ್ಚಿಸುವ ಪ್ರಸ್ತಾಪನೆಯನ್ನು ಮುಂದಿಟ್ಟಿದ್ದರು. ಅದರಂತೆ, 2022-23 ರಲ್ಲಿ 10% ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಶುಲ್ಕ ಹೆಚ್ಚಿಸಿದ್ದರು. ಆಗಲೂ ರಾಜ್ಯದ ವಿದ್ಯಾರ್ಥಿಗಳು ಮತ್ತು ಎಐಡಿಎಸ್ಓ ಶುಲ್ಕ ಹೆಚ್ಚಳವನ್ನು ವಿರೋಧಿಸಿದ್ದೆವು. ಇಂತಹ ಅಪ್ರಜಾತಾಂತ್ರಿಕ ಕ್ರಮವನ್ನು ಪ್ರಸಕ್ತ ರಾಜ್ಯ ಸರ್ಕಾರ ಮುಂದುವರೆಸಿ, ಶೇ.10 ರಷ್ಟು ಶುಲ್ಕ ಏರಿಕೆಗೆ ಒಪ್ಪಿಗೆ ನೀಡಿದೆ ಮತ್ತು ಹಿಂದಿನ ಸರ್ಕಾರದ ನಿರ್ಧಾರ ಬದಲು ಮಾಡಿದರೆ ಗೊಂದಲ ಸೃಷ್ಟಿಯಾಗುತ್ತದೆ ಎಂಬ ನೆಪವೊಡ್ಡಿದೆ. ರಾಜ್ಯ ಸರ್ಕಾರದ ಈ ನಡೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿಗೆ ಮಣ್ಣೆರಚಿದಂತೆ ಆಗಿದೆ.
ಶೈಕ್ಷಣಿಕ ಶುಲ್ಕ ಏರಿಕೆಯೆ ಅಪ್ರಜಾತಾಂತ್ರಿಕ ಮತ್ತು ಈ ಪ್ರಕ್ರಿಯೆಯು ಕ್ರಮೇಣವಾಗಿ ಮೆರಿಟ್ ಕೋಟಾವನ್ನು ನಾಶ ಮಾಡುತ್ತದೆ. ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣ ಹಲವು ಕೆಳ ಮಾಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೇರಿದಂತೆ ಇತರ ಉದ್ಯೋಗಾಧಾರಿತ ವ್ಯಾಸಂಗದ ಕಡೆ ಮುಖ ಮಾಡಿದ್ದಾರೆ. ಈ ಶುಲ್ಕ ಏರಿಕೆ ಅವರ ಮೇಲೆ ಮಾಡಿರುವ ದೊಡ್ಡ ಪ್ರಹಾರವಾಗಿದೆ. ಯಾವುದೇ ಕಾರಣಕ್ಕೂ ಶುಲ್ಕ ಏರಿಕೆ ಆಗಬಾರದು ಮತ್ತು ವಿದ್ಯಾರ್ಥಿಗಳ ಮೂಲಭೂತ ಹಕ್ಕಾದ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ಸಂಪೂರ್ಣ ವಹಿಸಬೇಕು.
ಈ ಕೂಡಲೇ ರಾಜ್ಯ ಸರ್ಕಾರವು ಇಂಜಿನಿಯರಿಂಗ್ ಶುಲ್ಕ ಹೆಚ್ಚಳದ ನಿರ್ಧಾರವನ್ನು ಕೈ ಬಿಡಬೇಕು ಎಂದು ಎಐಡಿಎಸ್ಓ ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಹಾಗೂ ಎಲ್ಲಾ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಪ್ರೇಮಿ ಜನತೆ ಸರ್ಕಾರದ ಬಡಜನ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡುತ್ತದೆ.
Tags
ಟಾಪ್ ನ್ಯೂಸ್