ಜರ್ನಲಿಸ್ಟ್ ಗಿಲ್ಡ್ ವತಿಯಿಂದ ವಾರ್ಷಿಕ ಕ್ರೀಡಾಕೂಟ
ಧಾರವಾಡ: ಸಮಾಜದ ಏಳ್ಗೆಗಾಗಿ ಸದಾ ಶ್ರಮಿಸುವ ಪತ್ರಕರ್ತರು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿ ಇರಬೇಕು ಎಂದು ಕೆವಿಜಿ ಬ್ಯಾಂಕಿನ ಹಿರಿಯ ಅಧಿಕಾರಿ ಉಲ್ಲಾಸ ಗುನಗಾ ಹೇಳಿದರು.
ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರ ವೃತ್ತಿ, ಸದಾ ಕ್ರೀಯಾಶೀಲತೆಯಿಂದ ಕೂಡಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪತ್ರಕರ್ತರು ಸದಾ ಉಲ್ಲಸಿತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಇಂತಹ ಕ್ರೀಡಾಕೂಟಗಳು ಉತ್ತಮ ಆರೋಗ್ಯ ಅಳವಡಿಸಿಕೊಳ್ಳಲು ಸಹಾಯಕ ಆಗುತ್ತವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಸದಾ ಸುದ್ದಿ ಮಾಡುವ ಒತ್ತಡದಲ್ಲಿ ಇರುವ ಪತ್ರಕರ್ತರು ಒಟ್ಟಿಗೆ ಸೇರಿ ಕ್ರೀಡಾಕೂಟ ಮಾಡಿದ್ದು, ಖುಷಿ ಸಂಗತಿ. ಹೀಗೆ ಎಲ್ಲರೂ ಒಂದೆಡೆ ಸೇರಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ವೃದ್ಧಿ ಆಗುತ್ತದೆ. ಇಂತಹ ಚಟುವಟಿಕೆಗಳು ಮೇಲಿಂದ ಮೇಲೆ ನಡೆಯುತ್ತಿರಲಿ ಎಂದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ್ ಹೊಂಗಲ್ ಮಾತನಾಡಿ, ಪ್ರಸ್ತುತ ಮುದ್ರಣ ಮಾಧ್ಯಮ ಪತ್ರಕರ್ತರು ಬರೀ ಪತ್ರಿಕೆಗಳಿಗೆ ವರದಿ ಮಾಡುವುದಕಷ್ಟೇ ಸೀಮಿತವಾಗಿಲ್ಲ. ವೆಬ್ ಮತ್ತು ಡಿಜಿಟಲ್ ಮಾಧ್ಯಮಗಳಿಗೂ ಸುದ್ದಿ ನೀಡುವ ಹೊಣೆಗಾರಿಕೆಗೆ ಹೊಂದಿದ್ದು, ಸದಾ ಒತ್ತಡದ ಜೀವನ ಶೈಲಿಗೆ ಒಳಗಾಗಿದ್ದೇವೆ. ಇದೆಲ್ಲದರಿಂದ ಹೊರ ಬಂದು ಕ್ರೀಡೆ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗಿ ಆಗುವುದು ಇಂದಿನ ಆಗತ್ಯ. ಇದರಿಂದ ಖಂಡಿತವಾಗಿಯೂ ಒಂದಿಷ್ಟು ಮನೋಲ್ಲಾಸ ಸಾಧ್ಯ ಎಂದರು.
ಯುವ ವಕೀಲ ಶ್ರೀಕಾಂತ ಕ್ಯಾತಪ್ಪನವರ ಮಾತನಾಡಿ, ಪತ್ರಕರ್ತರ ದೈಹಿಕ ಚಟುವಟಿಕೆಗಳಿಗೆ ಸಮಯ ಸಿಗುವುದೇ ಅಪರೂಪ. ಅಂತಹದರಲ್ಲಿ ಕ್ರೀಡಾಕೂಟ ಆಯೋಜಿಸಿ, ಎಲ್ಲರೂ ಭಾಗವಹಿಸಿರುವುದು ಖುಷಿ ಸಂಗತಿ. ಇನ್ನಷ್ಟು ಚಟುವಟಿಕೆಗಳ ಮೂಲಕ ಪತ್ರಕರ್ತರ ಸಂಘ ಮುನ್ನಡೆಸುವಂತೆ ಸಲಹೆ ನೀಡಿದರು.
ಗಿಲ್ಡ್ ನ ಕ್ರೀಡಾ ಸಮಿತಿ ಅಧ್ಯಕ್ಷ ನಿಜಗುಣಿ ದಿಂಡಲಕೊಪ್ಪ ಮಾತನಾಡಿ, ಪತ್ರಕರ್ತರು ಕ್ರೀಡಾ ಮನೋಭಾವದಿಂದ ಈ ಕೂಟದಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯನ್ನು ಮನರಂಜನೆ ಆಗಿಯೂ ಆಸ್ವಾಧಿಸಬೇಕು ಎಂದು ಸಲಹೆ ನೀಡಿದರು.
ಗಿಲ್ಡ್ ನ ಕ್ರೀಡಾ ಸಮಿತಿ ಸದಸ್ಯ ಹಿರಿಯ ಪತ್ರಕರ್ತ ಮಂಜುನಾಥ ಅಂಗಡಿ, ಮಲ್ಲಿಕಾರ್ಜುನ ಬಾಳನಗೌಡರ, ಶಶಿಧರ್ ಬುದ್ನಿ, ರಾಯಸಾಬ ಅನ್ಸಾರಿ, ರವಿಕುಮಾರ ಕಗ್ಗಣ್ಣವರ, ಸದ್ದಾಂ ಮುಲ್ಲಾ ಸೇರಿದಂತೆ ಗಿಲ್ಡ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
–––––––––––––––––––––––––––––––––––––
ಉತ್ತಮ ಜೀವನ ಶೈಲಿ ಮತ್ತು ಪರಿಶುದ್ಧ ಆಹಾರ ಕ್ರಮದಿಂದ ಮಾತ್ರ ಸದೃಢ ಆರೋಗ್ಯ ಹೊಂದಲು ಸಾಧ್ಯ. 40 ವರ್ಷ ಮೀರಿದ ಎಲ್ಲರೂ ದೈಹಿಕ ಪರಿಶ್ರಮಕ್ಕೆ ಒತ್ತು ನೀಡಲೇಬೇಕು. ಸಕ್ಕರೆ, ಮೈದಾದಂತಹ ಪದಾರ್ಥಗಳಿಂದ ದೂರ ಇದ್ದು, ಸಾವಯವ ಆಹಾರ ಸೇವಿಸಬೇಕು. ಚಟಗಳು ವ್ಯಕ್ತಿಯನ್ನು ಕ್ಷೀಣಿಸುತ್ತವೆ. ಹೀಗಾಗಿ ಪ್ರತಿಯೊಬ್ಬರು ಆಧುನಿಕ ಒತ್ತಡದ ಜಗತ್ತಿನಲ್ಲಿ ಕ್ರಮ ಬದ್ಧ ಬದುಕು ತಮ್ಮದಾಗಿಸಿಕೊಳ್ಳಬೇಕು.
–ಮುರುಗೇಶ ಚೆನ್ನಣ್ಣವರ, ಸಿಪಿಐ, ಹುಬ್ಬಳ್ಳಿ ಗ್ರಾಮೀಣ
ವರದಿ : ಪ್ರಶಾಂತ್ ಲೋಕಾಪುರ