ನಾಳೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ
ಕುಕನೂರು - ಧರ್ಮಸ್ಥಳ ಮೊದಲ ಬಸ್ ಗೆ ಚಾಲನೆ
ಕುಕನೂರು : ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಯೋಜನೆ ಭಾನುವಾರ ಮದ್ಯಾಹ್ನದಿಂದ ಜಾರಿಗೆ ಬರಲಿದ್ದು ಅಂದು ಮದ್ಯಾಹ್ನ ಕುಕನೂರು ಬಸ್ ನಿಲ್ದಾಣದಿಂದ ಧರ್ಮಸ್ಥಳಕ್ಕೆ ಹೊರಡುವ ಮೊದಲ ಬಸ್ ಗೆ ಶಾಸಕ ಬಸವರಾಜ್ ರಾಯರಡ್ಡಿ ಚಾಲನೆ ನೀಡಲಿದ್ದಾರೆ.
ಶಕ್ತಿ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಕುಕನೂರು ಬಸ್ ನಿಲ್ದಾಣದಲ್ಲಿ ಸಾರಿಗೆ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿ ಅವರು,ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ರಾಜ್ಯಾಧ್ಯoತ ಇದೇ 11 ನೇ ತಾರೀಖು ಭಾನುವಾರ ಜಾರಿಗೆ ಬರಲಿದೆ, ಮಹಿಳೆಯರು ತಮ್ಮ ಮೂಲ ಗುರುತಿನ ಚೀಟಿ ತೋರಿಸಿ ರಾಜ್ಯದಲ್ಲಿ ಉಚಿತ ಪ್ರಯಾಣ ಮಾಡಬಹುದು, ಎಂದು ರಾಯರಡ್ಡಿ ಹೇಳಿದರು.
ಮೂರು ತಿಂಗಳ ಮಟ್ಟಿಗೆ ಮಹಿಳೆಯರು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಅನಂತರ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದು, ಅದಕ್ಕಾಗಿ ಅರ್ಜಿ ಹಾಕಿ ಪಡೆದುಕೊಳ್ಳಲು ರಾಜ್ಯ ಸರ್ಕಾರ ಮಾರ್ಗ ಸೂಚಿಗಳನ್ನು ಪ್ರಕಟಿಸಲಿದೆ, ರಾಜ್ಯದಲ್ಲಿ ಸುಮಾರು ಮೂರುವರೆ ಕೋಟಿಯಷ್ಟು ಮಹಿಳೆಯರಿದ್ದು ಅವರೆಲ್ಲರಿಗೂ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ ಎಂದು ರಾಯರಡ್ಡಿ ಹೇಳಿದರು.
ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು ಈ ಮೊದಲು ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ, ಮೊದಲ ಯೋಜನೆ ಸ್ತ್ರೀ ಶಕ್ತಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯ ಭಾನುವಾರ ಮದ್ಯಾಹ್ನ ದಿಂದ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ, ಉಳಿದ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ, ಕಾಂಗ್ರೆಸ್ ಪಕ್ಷ ಜನಪರ ಕಾರ್ಯಗಳು, ಬಡವರಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು ರಾಜ್ಯದ ಜನರ ಕಲ್ಯಾಣಕ್ಕೆ ಬದ್ದವಾಗಿದೆ ಎಂದು ಶಾಸಕ ರಾಯರಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಭಾಗಿಯ ಸಾರಿಗೆ ಸಂಚಾರ ಅಧಿಕಾರಿ ಆರ್ ಬಿ ಜಾಧವ ಉಚಿತ ಪ್ರಯಾಣಕ್ಕೆ ಇಲಾಖೆ ಕೈಕೊಂಡ ತಯಾರಿ ಮತ್ತು ಮಾರ್ಗ ಸೂಚಿಯನ್ನು ತಿಳಿಸಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ, ಮುಖಂಡರಾದ ಕಾಸಿಂಸಾಬ್ ತಳಕಲ್, ಸಿದ್ದಯ್ಯ ಕಳ್ಳಿಮಠ, ಮಂಜುನಾಥ್ ಕಡೆಮನಿ, ಮಲ್ಲಿಕಾರ್ಜುನ ಬಿನ್ನಾಳ, ಸಂಗಮೇಶ ಗುತ್ತಿ, ಗಗನ್ ನೋಟಗಾರ್ ಇತರರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ