Hubli : ಆಪರೇಷನ್ ಹಸ್ತ ತಪ್ಪಿಸಿಕೊಳ್ಳಲು ರೆಸಾರ್ಟ್‍ನಲ್ಲಿ ಅವಿತ ಕುಳಿತರೇ ಪಾಲಿಕೆ ಬಿಜೆಪಿ ಸದಸ್ಯರು ?

ಆಪರೇಷನ್ ಹಸ್ತ ತಪ್ಪಿಸಿಕೊಳ್ಳಲು ರೆಸಾರ್ಟ್‍ನಲ್ಲಿ ಅವಿತ ಕುಳಿತರೇ ಪಾಲಿಕೆ ಬಿಜೆಪಿ ಸದಸ್ಯರು ?

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಷ್ಠಿತ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಸೋತಿದ್ದಾರೆ. ಬಿಜೆಪಿ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲು ಶೆಟ್ಟರ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಶೆಟ್ಟರ್ ಗಟ್ಟಿ ಮನಸ್ಸು ಮಾಡಿದ್ದೇಯಾದರೆ ಬಿಜೆಪಿ ಹಿಡಿತದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದನ್ನು ಮನಗಂಡಿರುವ ಬಿಜೆಪಿಗರು ಬೆದರಿ ರೆಸಾರ್ಟ್ ರಾಜಕಾರಣಕ್ಕೆ ಮೊರೆ ಹೋಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸಂಖ್ಯಾಬಲದಲ್ಲಿ ದೊಡ್ಡ ಪಕ್ಷವಾಗಿದೆ. ಸಂಖ್ಯಾಬಲ ಹೆಚ್ಚಿರುವ ಕಾರಣಕ್ಕೆ ಕಾಂಗ್ರೆಸ್ ‘ಆಪರೇಷನ್’ ಮಾಡಿದರೂ ಸಕ್ಸಸ್ ಆಗೇ ಬಿಡುತ್ತದೆ ಎನ್ನುವ ವಾತಾವರಣವಿಲ್ಲ. ಆದರೂ ಗಾಯಗೊಂಡಿರುವ ಹುಲಿಯಂತಾಗಿರುವ ಜಗದೀಶ ಶೆಟ್ಟರ್ ಅವರ ದಾಳಿಯಿಂದ ತಪ್ಪಿಸಿಕೊಳ್ಳಲು ಪಾಲಿಕೆ ಬಿಜೆಪಿ ಸದಸ್ಯರು ಕಾಡಿನಲ್ಲಿ ಅವಿತಿಟ್ಟುಕೊಂಡಿದ್ದಾರೆ.

ಬಿಜೆಪಿ ಬಹುದೊಡ್ಡ ಪಕ್ಷವಾಗಿದ್ದರೂ ಹೆದರಲು ಕಾರಣವಿದೆ. ಅದು ಪಾಲಿಕೆಯ ಬಿಜೆಪಿ ಸದಸ್ಯರಲ್ಲಿ ಬಹುಪಾಲು ಮಂದಿ ಜಗದೀಶ ಶೆಟ್ಟರ್ ಫಾಲೋವರ್ಸ್. ಬಿಜೆಪಿಯ ಪಾಲಿಕೆಯ ಸದಸ್ಯರಾಗಿರುವ ಬಹುಪಾಲು ಮಂದಿಗೆ ಜಗದೀಶ ಶೆಟ್ಟರ್ ಅವರೇ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು. ಈ ಕಾರಣಕ್ಕಾಗಿ ಇಂದಿಗೂ ಅವರು ಶೆಟ್ಟರ್ ಬಗ್ಗೆ ನಿಷ್ಠೆ ಇಟ್ಟುಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆಯಲ್ಲಿ ಶೆಟ್ಟರ್ ಅನುಯಾಯಿ ಪಾಲಿಕೆಯ ಬಿಜೆಪಿ ಸದಸ್ಯರು ನೇರವಾಗಿ ಶೆಟ್ಟರ್ ಪರ ಪ್ರಚಾರ ಮಾಡದಿದ್ದರೂ ಹಿಂಬಾಗಿಲಿನಿಂದ ಶೆಟ್ಟರ್‍ಗೆ ಮತಹಾಕುವಂತೆ ಮನವಿ ಮಾಡಿಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿಯಲ್ಲಿದ್ದೇ ಶೆಟ್ಟರ್‍ಗೆ ಮತ ಹಾಕಿಸುವಲ್ಲಿ ಕೆಲವರು ಸಫಲರಾಗಿದ್ದರು. ಹಾಗೆ ನೋಡಿದರೆ ಕೈ ನಾಯಕರೆನಿಸಿಕೊಂಡವರೇ ಜಗದೀಶ ಶೆಟ್ಟರ ಅವರಿಗೆ ಕೈಕೊಟ್ಟರು. ಇದಕ್ಕೆ ಕಾರಣವೂ ಇತ್ತು.


ಅದೇನೆಂದರೆ ಮುಂದಿನ ಚುನಾವಣೆಯಲ್ಲಿ ಜಗದೀಶ ಶೆಟ್ಟರ್ ಪಕ್ಕಕ್ಕೆ ಸರಿಸಿ ತಾವು ಪುನಃ ಟಿಕೆಟ್ ಕೇಳಬಹುದು ಎನ್ನುವುದು. ಇಂಥ ಕಾಂಗ್ರೆಸ್ ನಾಯಕರು ನಿಷ್ಠೆಯಿಂದ ಕಾಂಗ್ರೆಸ್‍ಪರ ಮತ್ತು ಶೆಟ್ಟರ್ ಪರ ಕೆಲಸ ಮಾಡಿದ್ದೇ ಆದಲ್ಲಿ ಶೆಟ್ಟರ್ ಗೆಲ್ಲುವುದು ಕಷ್ಟವಾಗಿರಲಿಲ್ಲ. ಆದರೂ ಶೆಟ್ಟರ್‍ಗೆ ಒಂದಿಷ್ಟು ಓಟು ಬಂದಿದೆ ಎನ್ನುವುದಾದರೆ ಅದರಲ್ಲಿ ಬಿಜೆಪಿಯ ಶೆಟ್ಟರ್ ನಿಷ್ಠ ಪಾಲಿಕೆಯ ಬಿಜೆಪಿ ಸದಸ್ಯರ ಪಾತ್ರವೂ ಇದೆ ಎನ್ನುವುದು ಸತ್ಯಾಂಶ. ಈ ಸಂಗತಿ ಪ್ರಹ್ಲಾದ ಜೋಶಿ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಸಂಜಯ ಕಪಟಕರ ಅವರಂತಹ ಪಕ್ಷದ ಪ್ರಮುಖರಿಗೆ ಗೊತ್ತಾಗಿದೆ.

ಯಾವುದೇ ಕ್ಷಣದಲ್ಲಿ ಶೆಟ್ಟರ್ ಆಪ್ತ ಬಳಗದ ಪಾಲಿಕೆಯ ಬಿಜೆಪಿ ಸದಸ್ಯರು ಬೆನ್ನಿಗೆ ಚೂರಿ ಇರಿಯಬಹುದು ಎನ್ನುವ ಕಾರಣಕ್ಕಾಗಿ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಉತ್ತರ ಕರ್ನಾಟಕ ಜಿಲ್ಲೆಯ ದಾಂಡೇಲಿ ಮತ್ತು ಯಲ್ಲಾಪುರ ರೆಸಾರ್ಟ್‍ಗೆ ತೆರಳಿ ಬಿಡಾರ ಹೂಡಿದ್ದಾರೆನ್ನಲಾಗಿದೆ. ರೆಸಾರ್ಟ್‍ಗೆ ತೆರಳಿದ ಮಾತ್ರಕ್ಕೆ ಶೆಟ್ಟರ್ ದಾಳಿಯಿಂದ ತಪ್ಪಿಸಿಕೊಳ್ಳುತ್ತಾರೆ ಎನ್ನಲಾಗದು. ಹುಬ್ಬಳ್ಳಿಯಲ್ಲಿಯೇ ಕುಳಿತುಕೊಂಡು ಶೆಟ್ಟರ್ ವ್ಯವಸ್ಥಿತ ಜಾಲ ಬೀಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನರಿತ ಕೇಂದ್ರ ಸಚಿವ ಜೋಶಿ ಅವರು ಬ್ರೆಜಿಲ್‍ನಿಂದ ಹುಬ್ಬಳ್ಳಿಗೆ ದೌಡಾಯಿಸುತ್ತಿದ್ದಾರೆ. ಒಂದೊಮ್ಮೆ ಪಾಲಿಕೆಯನ್ನೂ ಕಳೆದುಕೊಂಡಿದ್ದೇ ಆದಲ್ಲಿ ಜೋಶಿ ಅವರಿಗೆ ಹಾಗೂ ಬಿಜೆಪಿಗೆ ದೊಡ್ಡ ಮುಖಭಂಗವಾಗಲಿದೆ. ಈ ಕಾರಣಕ್ಕಾಗಿ ರೆಸಾರ್ಟ್ ರಾಜಕಾರಣಕ್ಕೆ ಬಿಜೆಪಿ ಮೊರೆ ಹೋಗಿದೆ.

ಅತ್ತ ಜಗದೀಶ ಶೆಟ್ಟರ್ ಅವರು ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಹು-ಧಾ ಪಾಲಿಕೆಯನ್ನು ಕೈವಶ ಮಾಡಿಕೊಳ್ಳಲು ರಹಸ್ಯ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರೆ ,ಇತ್ತ ಅವರ ಪ್ರಯತ್ನಕ್ಕೆ ತಕ್ಕ ಸಾಥ್ ನೀಡಲು ಪಾಲಿಕೆಯ ಪ್ರಭಾವಿ ಕಾಂಗ್ರೆಸ್ ಸದಸ್ಯರ ತಂಡವೊಂದು ಶತಾಯಗತಾಯ ಪಾಲಿಕೆಯಲ್ಲಿ ತಮ್ಮ ಪಕ್ಷದ ಆಡಳಿತ ಪ್ರತಿಷ್ಠಾಪಿಸಲು ಕಳೆದ 1 ತಿಂಗಳಿನಿಂದಲೇ ನಿರಂತರ ಪ್ರಯತ್ನ ಮುಂದುವರೆಸಿದ್ದು , ತಮ್ಮ ಬಿಜೆಪಿ ಪಾಲಿಕೆ ಸದಸ್ಯ ಮಿತ್ರರು , ಜೆಡಿಎಸ್‍ನ ಓರ್ವ ಸದಸ್ಯೆ , 3 ಎಐಎಂಐಎಂ ಸದಸ್ಯರು ಹಾಗೂ 3 ಪಕ್ಷೇತರ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.ಇದರಂಗವಾಗಿ ಈಗಾಗಲೇ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ , ನಗರಾಭಿವೃದ್ದಿ ಸಚಿವ ಭೈರತಿ ಸುರೇಶ , ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನೂ ಸಹ ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.

ವರದಿ : ಬಸವರಾಜ ಕಬಡ್ಡಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">