ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಂಪ್ಲಿ ಬಳಿ ಹೆಣ್ಣು ಕರಡಿ ಸಾವು
ಕಂಪ್ಲಿ: ಅಪರಿಚಿತ ವಾಹನ ಡಿಕ್ಕಿಯಿಂದ ಹೆಣ್ಣು ಕರಡಿಯೊಂದು ಮೃತಪಟ್ಟಿರುವುದು ರಾಜ್ಯ ಹೆದ್ದಾರಿ-29ರ ಮೆಟ್ರಿ-ದೇವಲಾಪುರ ಮಧ್ಯೆ ಇರುವ ಮಾರೆಮ್ಮ ದೇವಸ್ಥಾನ ಬಳಿ ಭಾನುವಾರ ನಸುಕಿನಲ್ಲಿ ಸಂಭವಿಸಿದೆ.
ಅಪಘಾತದಲ್ಲಿ ಕರಡಿಯ ಹಿಂದಿನ ಎಡಗಾಲಿಗೆ ಬಲವಾದ ಪೆಟ್ಟು ತಗುಲಿ ತೀವ್ರ ರಕ್ತಸ್ರಾವವಾಗಿದೆ.
ಕರಡಿಧಾಮದ ಉಪ ವಲಯ ಅರಣ್ಯ ಅಧಿಕಾರಿ ಸಂತೋಷ ಕೆ. ನಂದಿಗಟ್ಟಿ ಮಾತನಾಡಿ, 'ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಈ ಘಟನೆ ನಡೆದಿರುವುದು,ಪ್ರಾಥಮಿಕವಾಗಿ ಕಂಡುಬರುತ್ತಿದೆ. ಸುಮಾರು 5ರಿಂದ6 ವರ್ಷದ ಹೆಣ್ಣು ಕರಡಿಯಾಗಿದ್ದು, ಇದರ ಕಳೆಬರವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸುವುದಾಗಿ''ಪತ್ರಿಕಾ-ಮಾಧ್ಯಮ'ಗೆ ತಿಳಿಸಿದರು.
ಸತ್ತ ಕರಡಿಯನ್ನು ವೀಕ್ಷಿಸಲು ಸ್ಥಳದಲ್ಲಿ ಜನರ ದಂಡೆ ಸೇರಿತ್ತು.ರಾಜ್ಯ ಹೆದ್ದಾರಿ ಸೇರಿದಂತೆ ಸುತ್ತಲಿನ ಕೆಲ ಹಳ್ಳಿಗಳ ಪ್ರದೇಶವನ್ನು ವನ್ಯಜೀವಿ ವಲಯ ಎಂದು ಘೋಷಿಸಲಾಗಿದೆ.
ರಾಜ್ಯ ಹೆದ್ದಾರಿ ವ್ಯಾಪ್ತಿಯ ವನ್ಯಜೀವಿ ವಲಯ ನಿಧಾನವಾಗಿ ಸಂಚರಿಸಿ ಎನ್ನುವ ಸೂಚನಾ ಫಲಕ ಎಲ್ಲಿಯೂ ಅಳವಡಿಸಿಲ್ಲ.
ಇನ್ನಾದರೂ ಇಲಾಖೆ ಈ ಕುರಿತು ಕ್ರಮ ತೆಗೆದುಕೊಳ್ಳಲಿ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೌಡ್ರ ಬುಡನಗೌಡ, ದೇವಲಾಪುರ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಒತ್ತಾಯಿಸಿದರು.