ಗಂಡುಗಲಿ ಕುಮಾರರಾಮನ ರಾಜಧಾನಿ ಕುಮ್ಮಟದುರ್ಗ ಅಭಿವೃದ್ಧಿಗೆ ಸಚಿವ ತಂಗಡಗಿಗೆ ಮನವಿ
ಕುಮ್ಮಟದುರ್ಗ ಪ್ರಾಧಿಕಾರ ರಚಿಸಲು ಮನವಿ
ಕೊಪ್ಪಳ,: ವಿಜಯನಗರ ಸಾಮ್ರಾಜ್ಯ ಮೂಲಪುರುಷ, ಐತಿಹಾಸಿಕ ಚರಿತ್ರೆಯಲ್ಲಿ ದೈವವಾಗಿ ಪೂಜೆಗೊಳ್ಳುತ್ತಿರುವ ಏಕೈಕ ಅರಸ ಗಂಡುಗಲಿ ಕುಮಾರರಾಮನ ರಾಜಧಾನಿಯಾಗಿ ಕುಮ್ಮಟದುರ್ಗ ಪ್ರದೇಶವು ಮೆರೆದಿತ್ತು. ಆದರೆ ಈ ಪ್ರದೇಶವು ಮೂಲ ಸೌಕರ್ಯ ಮತ್ತು ಸೂಕ್ತ ರಕ್ಷಣೆ ಇಲ್ಲದೆ ಕಣ್ಮರೆಯಾಗುವ ಹಂತಕ್ಕೆ ಬಂದಿರುವುದು ದುರಂತ. ಈ ಐತಿಹಾಸಿಕ ಪ್ರದೇಶವನ್ನು ಅಭಿವೃದ್ಧಿಗೆ ಕುಮಾರರಾಮನ ವಂಶಸ್ಥ ಹಾಗೂ ಕುಮಾರರಾಮ ಹೋರಾಟ ಸಮಿತಿ ಕೊಪ್ಪಳ ಅಧ್ಯಕ್ಷ ಎಚ್.ರಾಜೇಶ ನಾಯಕ ದೊರೆ ಅವರು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಕೊಟ್ಟ ಬಳಿಕ ಮಾತನಾಡಿದ ಕುಮಾರರಾಮ ಹೋರಾಟ ಸಮಿತಿ ಅಧ್ಯಕ್ಷ ಎಚ್.ರಾಜೇಶ ನಾಯಕ ದೊರೆ, ಕನ್ನಡ ನಾಡಿನ ಸಾಂಸ್ಕೃತಿಕ ವೀರ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ಕುಮ್ಮಟದುರ್ಗ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು.
ಕುಡಿಯುವ ನೀರಿನ ವ್ಯವಸ್ಥೆ, ಯಾತ್ರಾ ನಿವಾಸ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಕಾರಟಗಿ ತಾಲೂಕು ಅಧ್ಯಕ್ಷರಾದ ಗದ್ದೆಪ್ಪ ನಾಯಕ, ವಕೀಲರಾದ ಸೋಮನಾಥ, ಹನುಮಂತಪ್ಪ ಚಂದಲಾಪುರ, ಹನುಮಂತಪ್ಪ ತೊಂಡಿಹಾಳ, ಕಾರ್ಯದರ್ಶಿಗಳಾದ ಶೇಖರ್.ಎಚ್, ಕನಕ ಎಚ್ ಸೇರಿದಂತೆ ಅನೇಕರು ಇದ್ದರು.
ವರದಿ : ಶಿವಕುಮಾರ್ ಹೀರೆಮಠ