ಮಹಿಳೆಯರ ಉಚಿತ ಬಸ್ ಪ್ರಯಾಣ, ಶಕ್ತಿ ಯೋಜನೆಗೆ ಶಾಸಕ ರಾಯರಡ್ಡಿ ಚಾಲನೆ
ಕುಕನೂರು : ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಬಹು ನಿರೀಕ್ಷಿತ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಇಂದು ಕುಕನೂರು ಯಲಬುರ್ಗಾ ಅವಳಿ ತಾಲೂಕಿನಲ್ಲಿ ಶಾಸಕ ಬಸವರಾಜ್ ರಾಯರಡ್ಡಿ ಅವರು ಚಾಲನೆ ನೀಡುವ ಮೂಲಕ ಜಾರಿಗೊಳಿಸಿದರು.
ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ರಾಯರಡ್ಡಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತಿದ್ದೇವೆ, ಮೊದಲ ಯೋಜನೆ ಹೆಣ್ಣು ಮಕ್ಕಳಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ರಾಜ್ಯದಲ್ಲಿ ಇಂದಿನಿಂದ ಜಾರಿಗೆ ಬರಲಿದ್ದು ರಾಜ್ಯದ ಮೂರುವರೆ ಕೋಟಿ ಮಹಿಳೆಯರಿಗೆ ಇದರ ಪ್ರಯೋಜನ ಸಿಗಲಿದೆ, ಹೆಣ್ಣುಮಕ್ಕಳು ಇನ್ನುಮುಂದೆ ಯಾವುದೇ ಕಿಲೋಮೀಟರ್ ಮಿತಿ ಇಲ್ಲದೇ ರಾಜ್ಯದಲ್ಲಿ ಎಲ್ಲಿಬೇಕಾದರೂ ಪ್ರಯಾಣ ಮಾಡಬಹುದು ಎಂದು ರಾಯರಡ್ಡಿ ಹೇಳಿದರು.
ಇಡೀ ರಾಜ್ಯದಲ್ಲಿ 1850 ಬಸ್ ಗ ಳಲ್ಲಿ 41 ಲಕ್ಷ ಪ್ರಯಾಣಿಕರು ಉಚಿತ ಪ್ರಯಾಣ ಮಾಡಲಿದ್ದಾರೆ, ಕುಕನೂರು ಯಲಬುರ್ಗಾ ಅವಳಿ ತಾಲೂಕಿನಲ್ಲಿ ಒಂದು ದಿನದಲ್ಲಿ 13 ಸಾವಿರ ಪ್ರಯಾಣಿಕರು ಉಚಿತ ಪ್ರಯಾಣ ಮಾಡಲಿರುವರು. ಇದಕ್ಕಾಗಿ ರಾಜ್ಯ ಸರ್ಕಾರ 4500 ಕೋಟಿ ಮೊತ್ತದ ಹಣವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಭರಿಸಲಿದೆ, ಕಾಂಗ್ರೆಸ್ ಪಕ್ಷ ಜನಪರ, ಜನರ ಕಲ್ಯಾಣಕ್ಕೆ ಸದಾ ಸಿದ್ದವಾಗಿದ್ದು ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಮುಂದುವರೆಯುತ್ತದೆ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದರು.
ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲ ಯೋಜನೆ ಇಂದು ಜಾರಿಗೆ ಬಂದಿದ್ದು, ಜುಲೈ 1 ರಿಂದ ಬಿ ಪಿ ಎಲ್ ಕಾರ್ಡ್ ಉಳ್ಳ ಪ್ರತೀ ಒಬ್ಬ ವ್ಯಕ್ತಿಗೂ ತಲಾ ಹತ್ತು ಕೆಜಿ ಉಚಿತ ಅಕ್ಕಿ ಯೋಜನೆ ಜಾರಿಗೆ ಬರಲಿದೆ, ಆಗಸ್ಟ್ 15 ರಿಂದ ಪ್ರತೀ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಯೋಜನೆ ಜಾರಿಗೆ ಬರಲಿದೆ, ಗೃಹಜ್ಯೋತಿ, ನಿರುದ್ಯೋಗ ಭತ್ಯೆ ಯೋಜನೆಗಳು ಕೂಡಾ ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ರಾಯರಡ್ಡಿ ಹೇಳಿದರು.
ಇನ್ನುಮುಂದೆ ತಾಲೂಕು ಕೇಂದ್ರದಲ್ಲಿ ತಿಂಗಳಲ್ಲಿ ಎರಡು ಸಲ ಜನಸಂಪರ್ಕ ಸಭೆ ಮಾಡುತ್ತೇನೆ, ಜನರ ಸಮಸ್ಯೆ, ಕುಂದುಕೊರತೆ ಏನೇ ಇದ್ದರೂ ಪರಿಹರಿಸುತ್ತೇನೆ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಕುಕನೂರು ತಹಸೀಲ್ದಾರ್ ಎಂ ನೀಲಪ್ರಭಾ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳು ಸೇರಿದಂತೆ, ಕಾಂಗ್ರೆಸ್ ಮುಖಂಡರಾದ ಬಸವರಾಜ್ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ್, ಕಾಸಿಂಸಾಬ್ ತಳಕಲ್, ನಾರಾಯಣಪ್ಪ ಹರಪನಹಳ್ಳಿ, ಮಲ್ಲಿಕಾರ್ಜುನ ಬಿನ್ನಾಳ, ಸಿದ್ದಯ್ಯ ಕಳ್ಳಿಮಠ, ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳಾದ ಸಾವಿತ್ರಿ ಗೊಲ್ಲರ, ಪರಿದಾ ಬೇಗಂ, ನಂದಿತಾ ದಾನರಡ್ಡಿ, ಪೂರ್ಣಿಮಾ ಶಶಿಮಠ ಇತರರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ