ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಅವರ ಆಪ್ತರ ಮನೆ, ಕಚೇರಿ ಮೇಲೆ ಫೆಬ್ರವರಿ 10ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸತತ 2 ದಿನಗಳ ಕಾಲ ಎಲ್ಲೆಡೆ ಜಾಲಾಡಲಾಗಿತ್ತು. ಭರತ್ ರೆಡ್ಡಿ ತಂದೆ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಮನೆಯಲ್ಲೂ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿತ್ತು.
ತನಿಖೆ ಆರಂಭಿಸಿದ್ದ ಇಡಿ
2002ರ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ (PMLA) ಅಡಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿತ್ತು. ದಾಳಿ ವೇಳೆ ಹಲವು ಮಹತ್ವದ ದಾಖಲೆ ಪತ್ರಗಳು, ವ್ಯವಹಾರ ದಾಖಲೆಗಳು ಮತ್ತು ಸ್ಥಿರ ಮತ್ತು ಚರ ಆಸ್ತಿಗಳ ವಿವರಗಳು ಲಭ್ಯವಾಗಿವೆ.
31 ಲಕ್ಷ ರೂಪಾಯಿ ನಗದು ಹಣ ವಶ
ದಾಳಿ ವೇಳೆ ಲೆಕ್ಕಕ್ಕೆ ಸಿಗದ 31 ಲಕ್ಷ ರೂಪಾಯಿ ನಗದು ಹಣ ಜೊತೆಗೆ ಮಹತ್ವದ ಸಾಕ್ಷ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಭರತ್ ರೆಡ್ಡಿ ಅವರು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬರೋಬ್ಬರಿ 42 ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ದಾಖಲೆ ಇಡಿ ಅಧಿಕಾರಿಗಳಿಗೆ ಸಿಕ್ಕಿದೆ.
ಇನ್ನು ಭರತ್ ರೆಡ್ಡಿ ಸಹೋದರ ಶರತ್ ರೆಡ್ಡಿ ವಿದೇಶಿ ಮೂಲದ ಕಂಪನಿಗಳಲ್ಲಿ ಬಹಿರಂಗಪಡಿಸದ ಹೂಡಿಕೆಗಳನ್ನು ಮಾಡಿರುವುದು ಪತ್ತೆಯಾಗಿದೆ. ಬೇನಾಮಿ ಹೆಸರಿನಲ್ಲಿ ಆಸ್ತಿಗಳಲ್ಲಿ ಹೂಡಿಕೆ ಮಾಡಿ ಸಂಶಯಾಸ್ಪದ ಸಾಲ ಪಡೆದಿದ್ದಾರೆ ಎನ್ನುವುದೂ ಕೂಡ ಪತ್ತೆಯಾಗಿದೆ.