ಜಗತ್ತಿಗೆ ಜಾತ್ಯತೀತ ಸಮಾಜದ ಕಲ್ಪನೆ ನೀಡಿದವರು ಬಸವಣ್ಣ
ಕಂಪ್ಲಿ :
ಇಡೀ ಜಗತ್ತಿಗೆ ಜಾತ್ಯತೀತ ಸಮಾಜದ ಕಲ್ಪನೆ ನೀಡಿದವರು ಶ್ರೀ ಜಗಜ್ಯೋತಿ ಬಸವೇಶ್ವರರಾಗಿದ್ದಾರೆ ಎಂದು ಕನ್ನಡ ಹಿತರಕ್ಷಣ ಸಂಘದ ಗೌರವ ಅಧ್ಯಕ್ಷರು ಹಾಗೂ ವೀರಶೈವ ಸಮಾಜದ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು
ಬಸವಣ್ಣನವರು ಧರ್ಮಕ್ಕೆ ವೈಚಾರಿಕತೆಯ ವಿವೇಕದ ಸ್ಪರ್ಶ ನೀಡಿದವರು. ಅಂಧಶ್ರದ್ಧೆ, ಅಂಧಾನುಕರುಣೆ, ಮೂಢನಂಬಿಕೆಗಳ ವಿರುದ್ಧ ಅವರು ನಡೆಸಿದ ಸಾಮಾಜಿಕ ಹೋರಾಟ ವಿನೂತನವಾದುದು. ಸಮಾಜದ ಸರ್ವಾಂಗೀಣ ಪ್ರಗತಿಗೆ, ವಿಕಾಸಕ್ಕೆ ದುಡಿಮೆಯ ಸಂಸ್ಕೃತಿ, ಬೆವರಿನ ಸಂಸ್ಕೃತಿ ಅತ್ಯಗತ್ಯ ಎಂದು ಹೇಳುವ ಮೂಲಕ ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದರು ಎಂದರು.
ಇದೆ ವೇಳೆ ಭಕ್ತಿ ಭಂಡಾರಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ನಮಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವರಾಜ್ ಶಿವಪುರ, ಮುಖಂಡರಾದ ಅರವಿ ಬಸವನಗೌಡ, ಪಿ.ಮೂಕಯ್ಯ ಸ್ವಾಮಿ, ಬಿ.ಸಿದ್ದಪ್ಪ, ಜಿ.ರಾಮಣ್ಣ, ಬಿ.ವಿ.ಗೌಡ, ಕೆ.ರಮೇಶ್, ಜಿ.ಪ್ರಕಾಶ್, ಉಪ ತಹಸೀಲ್ದಾರ್ ರವೀಂದ್ರ ಕುಮಾರ್ ತಾಲೂಕು ಆಡಳಿತ ಸಿಬ್ಬಂದಿ ಸೇರಿದಂತೆ ಇತರರಿದ್ದರು.