ಬಳ್ಳಾರಿ: ಬಿಸಿಲುನಾಡು ಬಳ್ಳಾರಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಹೇಗೆ ನಡೆಯಲಿದೆ ಅನ್ನೊದಿಕ್ಕೆ ಇಲ್ಲೊಂದು ನಿದರ್ಶನವಿದೆ. ಇವತ್ತು ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಸಚಿವಾಗಿರುವ ಬಿಜೆಡ್ ಜಮೀರ್ ಅಹ್ಮದ್, ಎಂಬಿ ಪಾಟೀಲ್ ಮತ್ತು ಬಿ ನಾಗೇಂದ್ರ ಜೊತೆ ಮೊದಲು ಬಂದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ (Tukaram) ನಾಮಪತ್ರ ಸಲ್ಲಿಸಿ ಹೊರಡುವಾಗಲೇ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು (B Sriramulu) ಭಾರೀ ಮೆರವಣಿಗೆಯಲ್ಲಿ ಅಲ್ಲಿಗೆ ಆಗಮಿಸಿದರು. ಬಿಜೆಪಿ ಕಾರ್ಯಕರ್ತರು, ಶ್ರೀರಾಮುಲು ಅವರ ಪರ ಜೈಕಾರ ಹಾಕುವುದು ಬಿಟ್ಟು ಕಾಂಗ್ರೆಸ್ ನಾಯಕರಿದ್ದ ಕಾರುಗಳನ್ನು ಸುತ್ತುವರಿದು ಮೋದಿ ಮೋದಿ (Modi slogan) ಅಂತ ಕೂಗಲಾರಂಭಿಸಿದರು. ಅವರು ಕಾರುಗಳನ್ನು ಘೇರಾಯಿಸಿದ್ದರಿಂದ ಕಾಂಗ್ರೆಸ್ ನಾಯಕರಿಗೆ ಮುಂದೆ ಸಾಗಲಿಲ್ಲ. ಕೊನೆಗೆ ಪೊಲೀಸರು ಹರಸಾಹಸಪಟ್ಟು ಬಿಜೆಪಿ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕಾಂಗ್ರೆಸ್ ಬೆಂಬಲಿಗರ ಸಂಖ್ಯೆ ಕಡಿಮೆ ಇತ್ತು. ನಂತರ ಭರ್ಜರಿ ರೋಡ್ ಶೋ ಮೂಲಕ ಕಚೇರಿಗೆ ಆಗಮಿಸಿದ್ದ ಶ್ರೀರಾಮುಲು ನಾಮಪತ್ರ ಸಲ್ಲಿಸಿದರು.