ಕಂಪ್ಲಿ: ಸೈಕಲ್ ಜಾಥಾದ ಮೂಲಕ ಮತದಾನ ಜಾಗೃತಿ
ಉತ್ತಮ ಭವಿಷ್ಯ ನಿರ್ಮಾಣಕ್ಕೆ ತಪ್ಪದೇ ಮತದಾನ ಮಾಡಿ: ತಹಶಿಲ್ದಾರ್ ಶಿವರಾಜ್
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಳಿನ ಉತ್ತಮ ಭವಿಷ್ಯ ನಿರ್ಮಾಣಗೊಳ್ಳಲು, ತಪ್ಪದೇ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಂಪ್ಲಿ ತಾಲ್ಲೂಕು ತಹಶೀಲ್ದಾರರಾದ ಶಿವರಾಜ ಅವರು ತಿಳಿಸಿದರು.
‘ಚುನಾವಣೆ ಪರ್ವ ದೇಶದ ಗರ್ವ’ ಎನ್ನುವ ಚುನಾವಣೆ ಆಯೋಗದ ಸಂದೇಶದೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕಂಪ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಹಾಗೂ ಪುರಸಭೆ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾನ ಜಾಗೃತಿ ಅಂಗವಾಗಿ ಕಂಪ್ಲಿ ಪುರಸಭೆ ಕಚೇರಿ ಆವರಣದಿಂದ ಆಯೋಜಿಸಿದ್ದ ಸೈಕಲ್ ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ನಿಮ್ಮ ಮತ ಅಮೂಲ್ಯವಾಗಿದ್ದು, ಯಾರಿಗೂ ಮಾರಿಕೊಳ್ಳಬಾರದು. ಮತದಾರರು ಯಾವುದೇ ಆಸೆ-ಆಮೀಷಗಳಿಗೆ ಮರುಳಾಗಬಾರದು. ನಿರ್ಭೀತರಾಗಿ ಮತ ಚಲಾಯಿಸಬೇಕು ಎಂದರು.
ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಆರ್.ಕೆ.ಶ್ರೀಕುಮಾರ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬ ಚುನಾವಣೆಗಳಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ನಿಮ್ಮವರಿಗೂ ಮಾಡುವಂತೆ ಪ್ರೇರಿಪಿಸಬೇಕು ಎಂದು ಕರೆ ನೀಡಿದರು.
ಸೈಕಲ್ ಜಾಥಾವು ಪಟ್ಟಣದ ಅಂಬೇಡ್ಕರ್ ಸರ್ಕಲ್‍ನಿಂದ ಪ್ರಾರಂಭವಾಗಿ, ನಡವಲ ಮಸೀದಿ, ತರಕಾರಿ ಮಾರುಕಟ್ಟೆ, ಸಣಾಪುರ ರಸ್ತೆ, ಶ್ರೀ ಸತ್ಯನಾರಾಯಣ ಪೇಟೆ ಮಾರ್ಗವಾಗಿ ತಹಸೀಲ್ದಾರರ ಕಚೇರಿ ಆವರಣಕ್ಕೆ ತಲುಪಿ ಮುಕ್ತಾಯಗೊಂಡಿತು.
ಬಳಿಕ ಮತದಾನ ನಮ್ಮೆಲ್ಲರ ಹಕ್ಕು -ತಪ್ಪದೇ ಮತದಾನ ಮಾಡಿ ಮತ್ತು ಮತದಾನದ ಜಾಗೃತಿ ಮೂಡಿಸುತ್ತೇನೆ ಎಂದು ಸಹಿ ಸಂಗ್ರಹ ಅಭಿಯಾನ ನಡೆಯಿತು.
ಜಾಥಾದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಮಲ್ಲನಗೌಡ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸುಮಾರು 265 ಕ್ಕೂ ಮಂದಿ ಭಾಗವಹಿಸಿದ್ದರು.