ಎಸ್‌ಕೆಎನ್‌ಜಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ
ತಂತ್ರಜ್ಞಾನದ ಆವಿಷ್ಕಾರದಿಂದ ಭಾಷಾ ಮಾಧ್ಯಮ ಬೆಳವಣಿಗೆ: ಪ್ರೊ.ಬಿ.ಕೆ.ರವಿ
ಆಧುನಿಕ ತಂತ್ರಜ್ಞಾನದ ಆವಿಷ್ಕಾರದಿಕದ ಭಾಷಾ ಮಾಧ್ಯಮದ ಬೆಳವಣಿಗೆಯಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಅವರು ತಿಳಿಸಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿಗಳು ಪತ್ರಿಕೋದ್ಯಮ ಸ್ಥಿತಿಗತಿ ಹಾಗೂ ಕನ್ನಡ ಮಾಧ್ಯಮ ಕುರಿತು ಅವಲೋಕನೆ ಅತ್ಯಗತ್ಯವಾಗಿದೆ. ತಾಂತ್ರಿಕತೆಯ ಅಭಿವೃದ್ಧಿಗೆ ಹೊಂದಿಕೊಳ್ಳುವ ಜೊತೆಗೆ, ಸಂವಹನ ವಿಷಯ ತಿಳಿದುಕೊಳ್ಳುವ ತುಡಿತ ಇರಬೇಕು. ತಂತ್ರಜ್ಞಾನ ಆವಿಷ್ಕಾರದಿಂದಲೇ ಭಾಷಾ ಮಾದ್ಯಮದ ಬೆಳವಣಿಗೆ ಉಂಟಾಗಿದೆ, ಇದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. 70 ದಶಕದಲ್ಲಿ ಅಚ್ಚುಮೊಳೆ ಮುದ್ರಣದ ಕಾಲದಿಂದ ಇದೀಗ ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಭಾಷಾ ಪತ್ರಿಕೆ, ವಾಹಿನಿಗಳು ಹುಟ್ಟುಕೊಂಡಿವೆ ಎಂದರು.
ಇದೇ ವಿದ್ಯಾರ್ಥಿಗಳಿಗೆ ಆಕಾಶವಾಣಿಯಲ್ಲಿ ಟೆಲಿಗ್ರಾಂ ಮೂಲಕ ಆಗಿನ ಮುಖ್ಯಮಂತ್ರಿಗಳ ವರದಿ ಮಾಡಿದ್ದ ಅನುಭವ ಹಂಚಿಕೊಂಡರು.
ಆಧುನಿಕ ತಂತ್ರಜ್ಞಾನ ಜ್ಞಾನದ ಜೊತೆಗೆ ಕುತೂಹಲ, ಪ್ರಚಲಿತ ವಿದ್ಯಮಾನಗಳ ಅರಿವು ಇರಬೇಕು. ಇದರೊಂದಿಗೆ ಗುರುತೋರುವ ಮಾರ್ಗ, ತಂದೆ ತಾಯಿ ಕನಸನ್ನು ನನಸು ಮಾಡಿಕೊಳ್ಳುವತ್ತ ಗಮನಹರಿಸಿದರೆ ವೃತ್ತಿಯಲ್ಲೂ ಯಶಸ್ಸು ಸಿಗುತ್ತದೆ ಎಂದರು.
ಇನ್ನೂ 3-4 ದಶಕಗಳ ಕಾಲ ಮುದ್ರಣ ಮಾಧ್ಯಮಕ್ಕೆ ಭವಿಷ್ಯ ಇದೆ. ಅಮೆರಿಕಾದ ನಿರ್ಮಾಣ ಸಂಸ್ಥೆಗಳು ಸಹ ಭಾರತ ಮನರಂಜನಾ ಉದ್ಯಮದಲ್ಲಿ ಬಂಡವಾಳ ಹೂಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಕ್ಷೇತ್ರದಲ್ಲಿ ಇರುವ ವಿಫುಲ ಅವಕಾಶ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ ವಿಭಾಗದಿಂದ ಪ್ರತಿ ವರ್ಷ ಭಿನ್ನ ಕಾರ್ಯಕ್ರಮ ನಡೆಯುತ್ತಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ 'ಯುವವಾಣಿ' ವರ್ಷಕೊಮ್ಮೆ ಬರುತ್ತಿದೆ. ಇನ್ಮುಂದೆ ವರ್ಷಕ್ಕೆ 3 ಸಂಚಿಕೆ ಹೊರತರಲು ಅಗತ್ಯ ಹಣಕಾಸಿನ ನೆರವು ಕಾಲೇಜು ವತಿಯಿಂದ ನೀಡಲಾಗುತ್ತದೆ. ಇದರ ಜೊತೆಗೆ ವಿಭಾಗಕ್ಕೆ ಬೇಕಾದ ಸ್ಟುಡಿಯೋ ನಿರ್ಮಾಣಕ್ಕೆ ಅಗತ್ಯ ಯೋಜನೆ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಅಗತ್ಯ ಅನುದಾನ ಕೆಕೆಆರ್‌ಡಿಬಿ ವತಿಯಿಂದ ಒದಗಿಸಲು ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೊರತಂದ 'ಯುವವಾಣಿ' ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಕೊಪಣ ಮಾಧ್ಯಮ ಹಬ್ಬದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಟ್ರೋಫಿಯನ್ನು ಗಣ್ಯರು ನೀಡಿದರು.
ಕಾರ್ಯಕ್ರಮದಲ್ಲಿ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಸದಸ್ಯರಾದ ಕೆ.ನಿಂಗಜ್ಜ ಅವರನ್ನು ಸನ್ಮಾನಿಸಲಾಯಿತು.