ಕಂಪ್ಲಿಯ ಹಳೆ ಐಬಿ ಯಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಸಿಎಂ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಮೋಹನ್ ದಾನಪ್ಪ
ಬೆಂಗಳೂರು: ಬಳ್ಳಾರಿ ಜಿಲ್ಲೆ ಕಂಪ್ಲಿಯ ಹಳೆಯ ಪ್ರವಾಸಿ ಮಂದಿರದಲ್ಲಿ ನೂತನ ನ್ಯಾಯಾಲಯವನ್ನು ಸ್ಥಾಪಿಸಲು ಕಟ್ಟಡ ನೀಡುವಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ, ಕೆ.ವಿ.ತ್ರಿಲೋಕ್ ಚಂದ್ರರವರಿಗೆ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಮನವಿ ಸಲ್ಲಿಸಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿಯು 2017 ರಲ್ಲಿ ನೂತನ ತಾಲೂಕಾಗಿ ಹೊರಹೊಮ್ಮಿದ್ದು 2017 ರಿಂದ ಪ್ರಸ್ತುತದವರೆಗೆ ತಾಲೂಕಿನ ಸಂಘ-ಸಂಸ್ಥೆಗಳ ನಿರಂತರ ಹೋರಾಟಗಳ ಪ್ರತಿಫಲವಾಗಿ ನೂತನ ತಾಲೂಕು ಕಂಪ್ಲಿ ಪಟ್ಟಣಕ್ಕೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪಿಸಲು ಅನುಮೋದನೆಗೊಂಡಿರುವುದು ಈ ಭಾಗದ ಜನತೆಗೆ ಸಂತಸದ ಸಂಗತಿಯಾಗಿದ್ದು ನೂತನ ನ್ಯಾಯಾಲಯ ಸ್ಥಾಪನೆಗೆ ಕಂಪ್ಲಿಯ ಹಳೆಯ ಪ್ರವಾಸಿ ಮಂದಿರದ ಕಟ್ಟಡವನ್ನು ನೀಡುವಂತೆ ಬಳ್ಳಾರಿ ಜಿಲ್ಲೆಯ ಜಿಲ್ಲಾ ಸತ್ರ ಮತ್ತು ಸೆಷನ್ ನ್ಯಾಯಾಧೀಶರು ಬಳ್ಳಾರಿಯ ಲೋಕೋಪಯೋಗಿ ವೃತ್ತ ಎಸ್‌ಇ ಮುಖಾಂತರ ಕಲ್ಬುರ್ಗಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಿಗೆ ಪತ್ರ ಬರೆಯಲಾಗಿದ್ದು ಮುಖ್ಯ ಅಭಿಯಂತರರು ಕಟ್ಟಡ ನೀಡಲು ಹಿಂದೇಟಾಕಿರುವುದು ತಾಲೂಕಿನ ಸಾರ್ವಜನಿಕರಿಗೆ ಬೇಸರ ನೀಡಿರುತ್ತದೆ,
ಕಂಪ್ಲಿಯಲ್ಲಿ ಪ್ರಸ್ತುತ ನೂತನವಾದ ಸುಸಜ್ಜಿತ 12 ಕೊಠಡಿಗಳ ಪ್ರವಾಸಿ ಮಂದಿರ ನಿರ್ಮಾಣಗೊಂಡಿದ್ದು ಉದ್ಘಾಟನೆಯ ಹಂತದಲ್ಲಿದ್ದು ಹಳೆಯ ಪ್ರವಾಸಿ ಮಂದಿರ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ತಂಗದೇ ಉಪಯೋಗಕ್ಕೆ ಬಾರದೇ ವ್ಯರ್ಥವಾಗಿದ್ದು ಈಗ ನೂತನ ಪ್ರವಾಸಿ ಮಂದಿರ ನಿರ್ಮಾಣವಾಗಿದ್ದರಿಂದ ಹಳೆಯ ಪ್ರವಾಸಿ ಮಂದಿರ ಅಕ್ಷರಸಹ ಉಪಯೋಗಕ್ಕೆ ಬಾರದೇ ಪಾಳುಬೀಳುತ್ತದೆ, ಆದ್ದರಿಂದ ನ್ಯಾಯಾಲಯ ಸ್ಥಾಪನೆಗೆ ಸಾರ್ವಜನಿಕರಿಗೆ ಸೂಕ್ತವಾದ ಮತ್ತು ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಪ್ರವಾಸಿ ಮಂದಿರ ಸೂಕ್ತವಾಗಿದ್ದು ನ್ಯಾಯಾಲಯ ಸ್ಥಾಪನೆಗೆ ಮಂಜೂರಾದ ನಿವೇಶನದಲ್ಲಿ ಕಟ್ಟಡ ನಿರ್ಮಾಣವಾಗುವವರೆಗೆ ಸದರಿ ಐಬಿಯಲ್ಲಿ ನ್ಯಾಯಾಲಯ ಸ್ಥಾಪಿಸುವುದರಿಂದ ತಾಲೂಕಿನ ಜನತೆಗೆ ಅನುಕೂಲವಾಗುತ್ತದೆ ಹಾಗೂ ಅನಾಗತ್ಯ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ನ್ಯಾಯಾಲಯ ಸ್ಥಾಪಿಸಿ ಸರ್ಕಾರದ ಬೊಕ್ಕಸ ನಷ್ಟ ಮಾಡುವುದಕ್ಕಿಂತ ಸರ್ಕಾರದ ಹಳೆಯ ಪ್ರವಾಸಿ ಮಂದಿರದಲ್ಲೆ ನ್ಯಾಯಾಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮೋಹನ್ ಕುಮಾರ್ ದಾನಪ್ಪ ನವರು ಮನವಿ ಸಲ್ಲಿಸಿದ್ದಾರೆ.