ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲೇ ಕನ್ನಡಪರ ಸಂಘಟನೆಗಳು Phonepe ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, #Boycott ಅಭಿಯಾನ ಆರಂಭಿಸಿವೆ.
ಹೌದು.. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ (Karnataka Job Reservation) ಜಾರಿಗೆ ಆಗ್ರಹಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕನ್ನಡ ಪರ ಸಂಘಟನೆಗಳಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕಾಯ್ದೆ ಜಾರಿ ಮಾಡುವುದಾಗಿ ಹೇಳಿದ ಬೆನ್ನಲ್ಲೇ ನಿರ್ಧಾರ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಖಾಸಗಿ ಕಂಪನಿಗಳ ಒತ್ತಡಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಣಿಯಬಾರದು. ಶೀಘ್ರವೇ ಮಸೂದೆ ಜಾರಿಗೊಳಿಸಬೇಕೆಂದು ಕನ್ನಡಪರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆದಿದ್ದು, ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈಗೆ ಕನ್ನಡದ ನೆಲ, ಜಲ ಬೇಕು. ಆದರೆ, ಕನ್ನಡಿಗರಿಗೆ ನೌಕರಿ ಕೊಡಿ ಎಂದರೆ ಇವರಿಗೆ ತೊಂದರೆ.
ನಾವು ಮುಂದಿನ ದಿನಗಳಲ್ಲಿ ಅವರ ಕಂಪನಿಗಳಿಗೆ ಮುತ್ತಿಗೆ ಹಾಕುತ್ತೇವೆ. ಸಿಎಂ ಸಿದ್ದರಾಮಯ್ಯ ಮಸೂದೆ ಜಾರಿಗೆ ತರದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಪ್ರತಿಭಟನೆ ವೇಳೆ ಉಧ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಮತ್ತು ಫೋನ್ ಪೇ ಸಂಸ್ಥೆಯ ಭಾವಚಿತ್ರ ಹಿಡಿದು ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಫೋನ್ ಪೇ ಮುಖ್ಯಸ್ಥರ ವಿರುದ್ಧ ಆಕ್ರೋಶ
ಇನ್ನು ಕನ್ನಡಿಗರಿಗೆ ಮೀಸಲಾತಿ ಕಾಯ್ದೆಗೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ʼಫೋನ್ ಪೇʼ ಬಾಯ್ಕಾಟ್ ಅಭಿಯಾನ (‘PhonePe’ boycott campaign) ಶುರುವಾಗಿದೆ.
ಕನ್ನಡಿಗರ ವಿರೋಧಿ ಸಮೀರ್ ನಿಗಮ್ ರ ಫೋನ್ ಪೇಯನ್ನು ಮೊಬೈಲ್ ನಿಂದ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಕನ್ನಡಿಗರ ವಿಷಯದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಉದ್ಧಟತನ ತೋರಿದ್ದಾರೆ. ಹೀಗಾಗಿ ಫೋನ್ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ. 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲಿಟ್ ಮಾಡುವಂತೆ ಅಭಿಯಾನ ಶುರು ಮಾಡಲಾಗಿದೆ.