ಕಂಪ್ಲಿ : ತಾಲೂಕಿನ ರಾಮಸಾಗರ ಗ್ರಾಮದ ಈಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಪ್ರಾಯೋಜನ ಅಡಿಯಲ್ಲಿ ಶ್ರೀ ಗುರು ಪಂಚಾಕ್ಷರಿ ಬಯಲಾಟ(ದೊಡ್ಡಾಟ)ಕಲಾ ಟ್ರಸ್ಟ್(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನ ಜರುಗಿತು.
ಮುಖಂಡರಾದ ಕೆ.ಎಂ. ಚಂದ್ರಶೇಖರಯ್ಯ ಸ್ವಾಮಿ ಮಾತನಾಡಿ ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ 'ಬಯಲಾಟ'ಗಳ ಸುಗ್ಗಿ ಆರಂಭವಾಗುತ್ತದೆ. ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪೌರಾಣಿಕ ಕಥೆಗಳ ಮೂಲಕ ಪ್ರಚಾರಗೊಳಿಸುವ ಉತ್ತರ ಕರ್ನಾಟಕದ ಗಂಡು ಕಲೆಯಾದ ಮೂಡಲಪಾಯ ಬಯಲಾಟ ಉಳಿಯಬೇಕು. ಮುಂದಕ್ಕೂ ಬೆಳೆಯಬೇಕು ಎಂದರು.
ಬಾಲಕೃಷ್ಣ ಪಾತ್ರದಲ್ಲಿ ಬಿ.ಎಂ.ವಿರೇಶ ಸ್ವಾಮಿ, ಅಭಿಮನ್ಯು ಪಾತ್ರದಲ್ಲಿ ಕೆ.ಎಂ.ಶರಣಯ್ಯ ಸ್ವಾಮಿ, ಶ್ರೀಕೃಷ್ಣನ ಪಾತ್ರದಲ್ಲಿ ಸಿ.ಎಂ.ಚೆನ್ನಬಸಯ್ಯಸ್ವಾಮಿ, ಅರ್ಜುನನ ಪಾತ್ರದಲ್ಲಿ ಬಿ.ಎಂ.ಶಂಕರಯ್ಯ ಸ್ವಾಮಿ, ಸುಭದ್ರ ಪಾತ್ರದಲ್ಲಿ ಜಿ.ಜ್ಯೋತಿ ಅಭಿನಯಿಸಿದರು. ಎಚ್.ಶಿವರುದ್ರಪ್ಪ ಹಾರ್ಮೋನಿಯಂ ನುಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸದಸ್ಯರಾದ ಎಚ್.ತಿಪ್ಪೆಸ್ವಾಮಿ ಮುದ್ದಟನೂರು, ಮುಖಂಡರಾದ ಎಚ್.ಜಗದೀಶ್ ಗೌಡ, ಬಿ.ಎಂ. ಬಸವರಾಜಸ್ವಾಮಿ, ಬಿ.ನಾರಾಯಣಪ್ಪ, ಎಚ್.ನಾಗರಾಜ ಗೌಡ, ಮೇಷ್ಟ್ರು ಬಸವರಾಜ್ ಗೌಡ, ದಾನ ಶೆಟ್ಟಿ ವಿರೂಪಾಕ್ಷಪ್ಪ, ಪಿ.ಮಹೇಶ್ ಯಾದವ್, ಜಂತಗಲ್ ಪಂಪಾಪತಿ, ಕೆ.ರುದ್ರಪ್ಪ ಸೇರಿದಂತೆ ಇತರರಿದ್ದರು.