ಇದೆಂಥಾ ಹುಚ್ಚಾಟ! ಗರ್ಭಗುಡಿಯಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ! ಫ್ಯಾನ್ಸ್ ಅಂಧಭಕ್ತಿಗೆ ಅರ್ಚಕ ಅಮಾನತು
ದೇವರ ವಿಗ್ರಹದ ಮುಂದೆ ದರ್ಶನ್ ಫೋಟೊ ಇಟ್ಟು ಅಂಧಾಭಿಮಾನ ಪ್ರದರ್ಶನ ಮಾಡಿದ್ದಕ್ಕೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಶ್ರಾವಣ ಮಾಸದ ಮೊದಲ ಸೋಮವಾರ ಆಗಿದ್ದರಿಂದ ಪೂಜೆಯ ವೇಳೆ ದರ್ಶನ್ ಫೋಟೋವನ್ನು ಪ್ರಾಣದೇವರ ದೇವರ ಮುಂದೆ ಇಟ್ಟು ಅರ್ಚಕನಿಂದ ಅಭಿಮಾನಿಗಳು ಪೂಜೆ ಮಾಡಿಸಿದ್ದಾರೆ.
ಕುರುಗೋಡು : ಸ್ಯಾಂಡಲ್‌ವುಡ್ ನಟ ದರ್ಶನ್ ಸಹಿತ ರೇಣುಕಾಸ್ವಾಮಿ (Renukaswamy Murder Case) ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳು ಜೈಲುಪಾಲಾಗಿದ್ದಾರೆ. ಇತ್ತ ದರ್ಶನ್ (Actor Darshan) ಬಿಡುಗಡೆಗೆ ದರ್ಶನ್ ಮನೆಯವರು ಮತ್ತು ಅಭಿಮಾನಿಗಳು ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಈತನ್ಮಧ್ಯೆ ದರ್ಶನ್ ಅಭಿಮಾನಿಗಳು ಅಂಧಭಕ್ತಿ ತೋರಿದ ಘಟನೆ ವರದಿಯಾಗಿದೆ.
ದೇವರ ಗರ್ಭಗುಡಿಯಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿ ಅಂಧಾಭಿಮಾನ ಮೆರೆದ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು, ಅದರಲ್ಲೂ ಮುಜರಾಯಿ ಇಲಾಖೆಗೆ ಸೇರಿದ ದೇಗುಲದಲ್ಲಿ ಇಂತಹ ಕೃತ್ಯ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕುರುಗೋಡು ದೊಡ್ಡಬಸವೇಶ್ವರ ದೇಗುಲದಲ್ಲಿ ಈ ಘಟನೆ ನಡೆದಿದ್ದು, ದೊಡ್ಡಬಸವೇಶ್ವರ ದೇವರ ಪ್ರಾಣ ಮೂರ್ತಿ ಮುಂದೆ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಲಾಗಿದೆ.
ದೇವರ ವಿಗ್ರಹದ ಮುಂದೆ ದರ್ಶನ್ ಫೋಟೊ ಇಟ್ಟು ಅಂಧಾಭಿಮಾನ ಪ್ರದರ್ಶನ ಮಾಡಿದ್ದಕ್ಕೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಶ್ರಾವಣ ಮಾಸದ ಮೊದಲ ಸೋಮವಾರ ಆಗಿದ್ದರಿಂದ ಪೂಜೆಯ ವೇಳೆ ದರ್ಶನ್ ಫೋಟೋವನ್ನು ಪ್ರಾಣದೇವರ ದೇವರ ಮುಂದೆ ಇಟ್ಟು ಅರ್ಚಕನಿಂದ ಅಭಿಮಾನಿಗಳು ಪೂಜೆ ಮಾಡಿಸಿದ್ದಾರೆ. ಸದ್ಯ ಆ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ದರ್ಶನ್ ಅಭಿಮಾನಿಗಳ ಅಂಧ ಭಕ್ತಿಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ನಿತ್ಯ ಪ್ರಾರ್ಥಿಸುವ ದೇವರ ವಿಗ್ರಹದ ಮುಂದೆಯೇ ಕೊಲೆ ಆರೋಪಿ ನಟನ ಫೋಟೋ ಇಟ್ಟು ಪೂಜೆ ಮಾಡಿದ್ದಕ್ಕೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸುದ್ದಿ ವ್ಯಾಪಕ ವೈರಲ್ ಆಗುತ್ತಿದ್ದಂತೆ ಯಾವುದೇ ಅನುಮತಿ ಪಡೆಯದೆ ನಟನ ಫೋಟೋ ಇಟ್ಟು ಪೂಜೆ ಮಾಡುವ ಮೂಲಕ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಕ್ಕೆ ದೇವಸ್ಥಾನದ ಆರ್ಚಕನನ್ನು ಅಮಾನತುಗೊಳಿಸಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.