ಟಿಬಿ ಡ್ಯಾಂ ಒಳಹರಿವು ಹೆಚ್ಚಳ : 4 ದಿನಗಳಲ್ಲಿ ಹರಿದು ಬಂತು 7 ಟಿಎಂಸಿ ನೀರು
ಕೊಪ್ಪಳ: ತುಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟಗೇಟ್ (Crest Gate) ಕೊಚ್ಚಿಕೊಂಡು ಹೋಗಿದ್ದು ದೊಡ್ಡ ಮಟ್ಟದ ಆತಂಕವನ್ನು ಹೆಚ್ಚಿಸಿತ್ತು. ಆದರೆ ವಾರದ ನಂತರ ಜಲಾಶಯಕ್ಕೆ ಸ್ಟಾಪ್ ಲಾಗ್‌ಗೇಟ್ ಅಳವಡಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದರು. ಸದ್ಯ ಡ್ಯಾಂ ಗೆ ಒಳಹರಿವು ಹೆಚ್ಚಾಗ್ತಿದ್ದು, ಕಳೆದ 4 ದಿನಗಳಲ್ಲಿ 7 ಟಿಎಂಸಿ ನೀರು ಹರಿದು ಬಂದಿದೆ. ಮತ್ತೊಮ್ಮೆ ಡ್ಯಾಂ ತುಂಬುವ ಭರವಸೆ ಮೂಡಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ಜಲಾಶಯದಿಂದ ಒಂದೇ ವಾರದಲ್ಲಿ 41 ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಸತತ ಶ್ರಮದಿಂದ ಸ್ಟಾಪ್‌ಲಾಗ್ ಗೇಟ್‌ನ ಐದು ಎಲಿಮೆಂಟ್‌ಗಳನ್ನು ಅಳವಡಿಸಿ, ಹರಿಯುವ ನೀರನ್ನು ತಡೆಯುವಲ್ಲಿ ಗೇಟ್ ನಿಪುಣ ಕನ್ನಯ್ಯ ನಾಯ್ಡು ಮತ್ತು ತಂಡ ಸಫಲವಾಗಿದೆ. ಡ್ಯಾಂ ನೀರು ಖಾಲಿಯಾಗುವ ಆತಂಕದಲ್ಲಿದ್ದ ಈ ಭಾಗದ ಜನರ ಆತಂಕವನ್ನು ದೂರ ಮಾಡಿದ್ದಾರೆ. ಸದ್ಯ ಒಳಹರಿವು ಹೆಚ್ಚಾಗಿದ್ದು ಜನರಲ್ಲಿ ಡ್ಯಾಂ ತುಂಬುವ ಆಶಾಭಾವನೆ ಮೂಡಿದೆ.