ಭ್ರಷ್ಟಾಚಾರ ಆರೋಪ ಹೊತ್ತ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ರಾಮುಲು
ಮುಡಾ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಹುದ್ದೆಯಲ್ಲಿದ್ದವರನ್ನು ತನಿಖೆ ಮಾಡಲು ಅಧಿಕಾರಿಗಳಿಗೆ ಕಷ್ಟವಾಗುತ್ತದೆ. ನಿಷ್ಪಕ್ಷಪಾತ ತನಿಖೆಗೆ ಆಸ್ಪದವಾಗುವುದಿಲ್ಲ. ಸಿದ್ದರಾಮಯ್ಯ ಕೂಡಲೇ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಸುಮಾರು ₹21ಕೋಟಿಯನ್ನು ಅಕ್ರಮವಾಗಿ ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ ಎಂದು ತನಿಖಾ ಸಂಸ್ಥೆಗಳಿಂದ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಈ.ತುಕಾರಾಂ ರಾಜೀನಾಮೆ ನೀಡಬೇಕು. ಸಂಸದ ಸ್ಥಾನವನ್ನು ಅಸಿಂಧುಗೊಳಿಸಲು ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚಿಸುತ್ತಿರುವೆ ಎಂದರು.
ಸಂಸದ ತುಕಾರಾಂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದು ಸಂತೋಷ ಲಾಡ್ ಅವರ ಕೃಪಾಕಟಾಕ್ಷದಿಂದ ಎಂಬುದನ್ನು ಮರೆಯಬಾರದು. ನಮ್ಮ ವಿರುದ್ಧ ಸವಾಲು ಹಾಕುವುದನ್ನು ಬಿಟ್ಟು ಸ್ವಂತ ಶಕ್ತಿಯಿಂದ ಗೆದ್ದು ಬರಲಿ. ವಾಲ್ಮೀಕಿ ನಿಗಮದಲ್ಲಿ ಅಷ್ಟೊಂದು ದೊಡ್ಡ ಹಗರಣ ನಡೆದರೂ ತುಕಾರಾಂ ಯಾವುದೇ ಧ್ವನಿ ಎತ್ತಲಿಲ್ಲ. ಇದೀಗ ನನ್ನ ವಿರುದ್ಧ ಸವಾಲು ಹಾಕುತ್ತಿದ್ದಾರೆ. ನಿಗಮದ ಹಣದಿಂದ ಗೆದ್ದು ಬಂದವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.