ಕುರುಗೋಡು : ಸಮೀಪದ ಬಾದನಹಟ್ಟಿ ಗ್ರಾಮದ ಹೊಲವೊಂದರಲ್ಲಿದ್ದ ಅಪರೂಪದ ಅಪ್ರಕಟಿತ ಶಾಸನೋಕ್ತ ವೀರಗಲ್ಲನ್ನು ಶೋಧಿಸಲಾಗಿದೆ. ಈ ವೀರಗಲ್ಲನ್ನು ಹನುಮಂತ ರೆಡ್ಡಿ ಅವರ ಸಲಹೆಯಂತೆ ಗ್ರಾಮದ ಡಾ.ಗಂಗಾಧರ, ಕೃಷ್ಣಮೂರ್ತಿ, ಕೆ.ವೀರಭದ್ರಗೌಡ ಅವರುಗಳ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ. ಹೆಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೆಗೌಡ, ಡಾ.ವೀರಾಂಜನೇಯ, ಸಂಶೋಧಕರಾದ ಹೆಚ್. ರವಿ,ಮಂಜುನಾಥ್ ಅವರುಗಳು ಅಪ್ರಕಟಿತ ವೀರಗಲ್ಲನ್ನು ಪತ್ತೆಹಚ್ಚಿದ್ದಾರೆ.
ಈ ಶಾಸನೋಕ್ತ ವೀರಗಲ್ಲು ಉತ್ತರಾಭಿಮುಖ ವಾಗಿದ್ದು, ಎರಡು ಹಂತದಲ್ಲಿ ರಚನೆ ಮಾಡಲಾಗಿದೆ. ಅಪರೂಪವಾದ ವೀರಗಲ್ಲಿನಲ್ಲಿ ವೀರನು ಎದುರಾಳಿಯ ದಾಳಿಯನ್ನು ದೀರೋದಾತ್ತವಾಗಿ ಕಾದಾಟ ಮಾಡುವುದನ್ನು ತುಂಬಾ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ೮ ಅಡಿ ಎತ್ತರ ೩ ಅಡಿ ಅಗಲದ ವೀರಗಲ್ಲು ಪೆಗ್ಗಡೆಯ ಮಗನಾದ ಸಿರಿಯಣ್ಣನು ವೀರಮರಣ ಹೊಂದಿರುವ ಕುರಿತಾಗಿ ಮಾಹಿತಿ ನೀಡುತ್ತದೆ. ರಾಷ್ಟ್ರಕೂಟರ ಕಾಲದ ಲಿಪಿಯನ್ನು ಹೋಲುವ ಈ ಶಾಸನ ಪಾಠವು ಮೂರು ಸಾಲುಗಳಲ್ಲಿದೆ.
ಶ್ರೀ ಕೊಂಡ ಸರು ಪಾಡದಿ ಪೆಗ್ಗಡೆಯ ಮಗ ಸಿರಿಯಣ್ಣ ಎಂಬುದಾಗಿ ನಮೂದಿಸಲಾಗಿದೆ. ಪ್ರತಿ ಸಾಲಿನ ಅಕ್ಷರಗಳು ಮೂರು ಇಂಚು ಎತ್ತರ ಎರಡು ಇಂಚು ಅಗಲವಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಗೋವಿಂದ ಅವರು ತಿಳಿಸಿದ್ದಾರೆ.
ಮೂರು ಹಂತದಲ್ಲಿರುವ ವೀರಗಲ್ಲಿನ ಮೊದಲ ಹಂತದಲ್ಲಿ ಖಡ್ಗ ಹಿಡಿದು ಕಾದಾಟ ಮಾಡುವ ವೀರನು ಸಿರಿಯಣ್ಣನಿರಬೇಕು. ಭೀಕರ ವದನದಿಂದ ಕಾಣಿಸುವ ವೀರನು ಬಲಗೈಲಿ ಖಡ್ಗ, ನಡುವಿಗೊಂದು ಬಾಕು ಸಿಕ್ಕಿಸಿಕೊಂಡಿದ್ದಾನೆ. ಆತನು ಬಲ ಕೈಲಿಡಿದ ಖಡ್ಗದಿಂದ ವೈರಿಯ ತಲೆಯನ್ನು ಕತ್ತರಿಸಿರಬೇಕು. ಇದರಿಂದ ಎದುರಾಳಿಯ ರುಂಡವನ್ನು ಎಡಗೈಲಿ ಹಿಡಿದು ಮುಂಡದಿಂದ ಬೇರ್ಪಟ್ಟಂತೆ ಇರುವ ಚಿತ್ರಣದ ಕೆತ್ತನೆ ಕಂಡುಬರುತ್ತದೆ. ವೀರನು ಮೊದಲು ಎದುರಾಳಿಯನ್ನು ಕೊಂದಿರಬೇಕು. ಹಾಗೇನೆ ವೀರನ ಎದುರಿಗೆ ಮೂವರು ಸೈನಿಕರನ್ನು ಚಿತ್ರಿಸಲಾಗಿದೆ. ವಿಶೇಷವಾಗಿ ಮೂವರು ಎದುರಾಳಿಗಳು ಬಲಗೈಯಲ್ಲಿ ಬಿಲ್ಲು ಹಿಡಿದರೆ,ಎಡಗೈಲಿ ಬಾಕು ಹಿಡಿದಿದ್ದಾರೆ. ಅವರುಗಳು ವೀರನಿಗೆ ಬಿಲ್ಲಿನಿಂದ ಹೂಡಿದ ಬಾಣಗಳು ವೀರನ ಕಾಲ ಕೆಳಗಡೆ ಬಿದ್ದಿರುವಂತೆ ಚಿತ್ರಿಸಲಾಗಿದೆ. ಕೊನೆಗೆ ವೀರ ಸಿರಿಯಣ್ಣನನ್ನು ಎದುರಾಳಿಗಳು ಕೊಲೆ ಮಾಡಿರಬೇಕು. ಇದನ್ನೇ ಎರಡನೇ ಹಂತದಲ್ಲಿ ದೇವ ಕನ್ನಿಕೆಯರು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುವ ಚಿತ್ರಣವನ್ನು ಸುಂದರವಾಗಿ ಕೆತ್ತಲಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರೊ. ಹೆಚ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಹಾಗೇನೆ ಈ ವೀರಗಲ್ಲಿನ ವೀರನನ್ನು ಇಂದಿಗೂ ಗ್ರಾಮಸ್ತರು ಬಂಡಾರು ನಾಯಕ ಎನ್ನುತ್ತಾರೆ. ಅಲ್ಲದೇ ಅಲ್ಲಿನ ಗ್ರಾಮದೇವತೆಗಳಾದ ಬಾದನಹಟ್ಟಿ ಉಡುಸಲಮ್ಮ, ವದ್ದಟ್ಟಿ ದುಗ್ಗಲಮ್ಮ ಅವರುಗಳಿಗೆ ಈ ಬಂಡಾರು ನಾಯಕ ಅಣ್ಣ ಎಂಬ ಭಾವನೆಯಿಂದ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿದುಬಂದಿದೆ. ಇಂತಹ ಸುಂದರವಾದ ವೀರಗಲ್ಲನ್ನು ಸಂಬಂಧಪಟ್ಟ ಇಲಾಖೆಯು ಸಂರಕ್ಷಣೆ ಮಾಡಬೇಕೆಂದು ಕನ್ನಡ ವಿವಿ ಯ ದೃಶ್ಯಕಲಾ ವಿಭಾಗದ ಡಾ. ಕೃಷ್ಣೆಗೌಡ ತಿಳಿಸಿದ್ದಾರೆ.
ಈ ಶಾಸನವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಮಶಿವಮೂರ್ತಿ, ನಿವೃತ್ತ ಪ್ರಾಧ್ಯಾಪಕರಾದ ಲಕ್ಷ್ಮಣ ತೆಲಗಾವಿ ಅವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಈ ಶಾಸನೋಕ್ತ ವೀರಗಲ್ಲಿನ ಲಿಪಿಯನ್ನು ನಿವೃತ್ತ ಪ್ರಾಧ್ಯಾಪಕರಾದ ದೇವರಕೊಂಡಾರೆಡ್ಡಿ ಅವರ ನೆರವಿನಿಂದ ಓದಲಾಗಿದೆ.
ಅಪರೂಪದ ಶಾಸನೋಕ್ತ ವೀರಗಲ್ಲನ್ನು ಪತ್ತೆ ಮಾಡಿದ ವಿಜಯನಗರ ತಿರುಗಾಟ ತಂಡಕ್ಕೆ ಕುಲಸಚಿವರಾದ ಡಾ ವಿಜಯ್ ಪೂಣಚ್ಚ ತಂಬoಡ,ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರುಗಳಾದ ಮಲ್ಲಿಕಾರ್ಜುನ ವಣೆನೂರು, ವೆಂಕಟಗಿರಿ ದಳವಾಯಿ ವೆಂಕಟೇಶ್ ಇಂದ್ವಾಡಿ. ಸಿಬ್ಬಂದಿವರ್ಗ ಹಾಗೂ ಸಂಶೋಧನಾರ್ಥಿಗಳು ಅಭಿನಂದಿಸಿದ್ದಾರೆ