ನಿತ್ಯೋತ್ಸವದ ಕವಿ ನಿಸಾರ್ ಅಹಮದ್ :ಶಿಕ್ಷಕಿ ವರ್ಷಾ ಮಂಜುಮದಾರ್
ಕಂಪ್ಲಿ: ಜೋಗದ ಸಿರಿ ಬೆಳಕನ್ನು, ತುಂಗಾ ತೀರದ ತೆನೆಗಳ ಬಳುಕುವಿಕೆಯಲ್ಲಿ ಅಡಗಿರುವ ಸೊಬಗನ್ನು, ಸಹ್ಯಾದ್ರಿಯ ಉತ್ತುಂಗವನ್ನು ನಾಡಿನುದ್ದಗಲಕ್ಕೂ ಪರಿಚಯಿಸಿದ, ಕುರಿಗಳಂತೆ ನಮ್ಮೊಳಗಡಗಿರುವ ಅಮಾಯಕ ಮನಸ್ಥಿತಿಯನ್ನು ತಮ್ಮ ವಿಭಿನ್ನ ವಿಡಂಬನಾ ಶೈಲಿಯಲ್ಲಿ ಕಟ್ಟಿಕೊಟ್ಟ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಎಂದು ಶಿಕ್ಷಕಿ ವರ್ಷಾ ಮಂಜುಮದಾರ್ ಅಭಿಪ್ರಾಯ ಪಟ್ಟರು ಅವರು ಇಲ್ಲಿನ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕೆ ಎಸ್ ನಿಸಾರ್ ಅಹಮದ್ ಅವರ ಜನ್ಮ ದಿನಾಚರಣೆಯ ಕುರಿತು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾಡಿ ಮಾತನಾಡಿದರು. ತಮ್ಮ 10ನೇ ವಯಸ್ಸಿನಿಂದಲೇ ಬರವಣಿಗೆಯ ಗೀಳು ಹತ್ತಿಸಿಕೊಂಡ ನಿಸಾರ್ ಅಹ್ಮದ್ ಅವರು 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, ತಲಾ ಐದು ಮಕ್ಕಳ ಸಾಹಿತ್ಯ ಹಾಗೂ ಅನುವಾದ ಕೃತಿಗಳು ಹಾಗೂ 13 ಸಂಪಾದನಾ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ಕೊಟ್ಟುಹೋಗಿದ್ದಾರೆ. ಅವರು ರಚಿಸಿದ ಸಾಹಿತ್ಯ, ಭಾವಗೀತೆಗಳು ನಮ್ಮ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತವೆ
ಸರಳ ಹಾಗೂ ಹೃದಯಸ್ಪರ್ಶಿ ಭಾಷೆಯ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ‘ನಿತ್ಯೋತ್ಸವ‘ದ ರಂಗು ತುಂಬಿದ ನಿಸಾರ್ ಅವರು ಥಳುಕು ಬಳುಕಿನಿಂದ ಹಿಡಿದು ಶಿವಮೊಗ್ಗೆಯಲ್ಲಿ ಜುಲೈನಲ್ಲಿ ಕಾಣಿಸುವ ಸೋನೆ ಮಳೆಯ ವೈಭವದವರೆಗಿನ ನಿತ್ಯವೂ ಎದುರಾಗುವ ಪ್ರಸಂಗಗಳನ್ನೇ ಬಳಸಿ ಕವಿತೆ ಹೊಸೆಯುತ್ತಾ, ಸಂಬಂಧಗಳ ಮಹತ್ವ ತಿಳಿಸುತ್ತಾ, ಬದುಕಿನಲ್ಲಿ ಸಾರ್ಥಕತೆಯತ್ತ ಹೆಜ್ಜೆ ಹಾಕುವ ಪರಿಯನ್ನು ಹೇಳಿಕೊಟ್ಟ ಮಗು ಮನಸ್ಸಿನ ಕವಿ ಅನಂತತೆಯನ್ನು ಮನಸ್ಸಿಗೆ ಕಚಗುಳಿ ಇಡುವ ಹೊಸಬಗೆಯ ಕವಿತೆಗಳು, ಚಿಂತನೆಗೆ ಒರೆಹಚ್ಚುವ ವೈಚಾರಿಕ ಬರಹಗಳು ಹಾಗೂ ಮಕ್ಕಳ ಸಾಹಿತ್ಯ ಕೃತಿಗಳ ಮೂಲಕ ಅವರು ಕನ್ನಡಿಗರ ಮನಸುಗಳಲ್ಲಿ ನಿತ್ಯೋತ್ಸವವಾಗಿಯೇ ಸದಾ ಉಳಿಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಗುರು ಬಡಿಗೇರ್ ಜಿಲಾನಸಾಬ್, ಕೆ . ಶ್ವೇತಾ, ಕೋಲ್ಕರ ಉಮಾ, ಮುಸ್ಕಾನ, ಸುನಿತಾ, ಮಣ್ಣೂರ ಲಕ್ಷ್ಮಿ , ಜೆ ಅಕ್ಷತಾ, ಗೌಸಿಯ ಸೇರಿದಂತೆ ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.