ವಿರಾಟ್ ಕೊಹ್ಲಿ ಆರ್ಭಟದ ಶತಕಕ್ಕೆ ತತ್ತರಿಸಿದ ಪಾಕಿಸ್ತಾನ
ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ದಾಖಲೆಗಳ ಸರದಾರ. ಕೊಹ್ಲಿ ಆಡುವಾಗೆಲ್ಲಾ ಯಾವುದಾದರೂ ಒಂದು ದಾಖಲೆ ಮುರಿಯುತ್ತದೆ ಹೊಸ ದಾಖಲೆ ನಿರ್ಮಾಣವಾಗುತ್ತದೆ. ದುಬೈನಲ್ಲಿ ನಡಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025ರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ದಶಕಗಳಿಂದ ಏಕದಿನ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಕೊಹ್ಲಿ ಅಂದುಕೊಂಡಂತೆ ಉತ್ತಮ ಫಾರ್ಮ್‌ನಲ್ಲಿ ಇಲ್ಲದೇ ಇದ್ದರೂ ಹಲವು ದಾಖಲೆಗಳನ್ನು ಮಾತ್ರ ಮುರಿಯುತ್ತಲೇ ಇದ್ದಾರೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 17 ರನ್ ಗಳಿಸಿದಾಗ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ದಾಖಲೆ ಮಾಡಿದರು. ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಾಕ್ಕರ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ಮೂರನೇ ಆಟಗಾರ ಎನ್ನುವ ಸಾಧನೆ ಮಾಡಿದರು.
ವೇಗವಾಗಿ 14,000 ರನ್
ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಾಕ್ಕರ ಏಕದಿನ ಕ್ರಿಕೆಟ್‌ನಲ್ಲಿ 14,000 ಕ್ಕಿಂತ ಹೆಚ್ಚಿನ ರನ್ ಗಳಿಸಿದ್ದರೂ, ಅತಿ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಇದೀಗ ಕೊಹ್ಲಿ ಪಾಲಾಗಿದೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 44.83 ಸರಾಸರಿಯಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ್ ಸಂಗಾಕ್ಕರ 380 ಇನ್ನಿಂಗ್ಸ್‌ಗಳಲ್ಲಿ 41.98 ಸರಾಸರಿಯಲ್ಲಿ 14,234 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 286 ಇನ್ನಿಂಗ್ಸ್‌ಗಳಲ್ಲಿ 57.78 ಸರಾಸರಿಯಲ್ಲಿ 14,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಪಾಕಿಸ್ತಾನ ಮಣಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿದ ಭಾರತ
ದೇಶಾದ್ಯಂತ ಸಂಡೇ ಮಜಾ ಜೋರಾಗಿದೆ. ಕಾರಣ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತದ ಭರ್ಜರಿ ಗೆಲುವು. ಇಷ್ಟೇ ಅಲ್ಲ ಭಾರತದ ಸೆಮಿಫೈನಲ್ ಸ್ಥಾನ ಕೂಡ ಖಚಿತಗೊಂಡಿದೆ.
ಭಾರತದೆಲ್ಲೆಡೆ ಸಂಭ್ರಮ ಜೋರಾಗಿದೆ. ಭಾನುವಾರ ಕ್ರಿಕೆಟ್ ಪ್ರಿಯರು ಮಾತ್ರವಲ್ಲ, ಬಹುತೇಕರು ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಿದ್ದಾರೆ. ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬದ್ಧವೈರಿ ಪಾಕಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ದುಬೈನಲ್ಲಿ ನಡದ ಈ ಪಂದ್ಯದಲ್ಲಿ ಭಾರತ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ.
ಈ ಪಂದ್ಯದಲ್ಲಿ ಹಲವು ವಿಶೇಷತೆಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವು ಯಾವತ್ತೂ ಸ್ಪೆಷಲ್. ಇದರಲ್ಲಿ ಎರಡು ಮಾತಿಲ್ಲ. ಜೊತೆಗೆ ಸೆಮಿಫೈನಲ್ ಸ್ಥಾನ ಮಾತ್ರವಲ್ಲ, ವಿರಾಟ್ ಕೊಹ್ಲಿ ಅಬ್ಬರಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ವಿರುದ್ಧ ಯಾವತ್ತೂ ವಿರಾಟ್ ಕೊಹ್ವಿ ಆರ್ಭಟಿಸುತ್ತಾರೆ ಅನ್ನೋದು ಮತ್ತೆ ಸಾಬೀತುಪಡಿಸಿದ್ದಾರೆ. ಅತೀವ ಒತ್ತಡ, ಬದ್ಧವೈರಿಗಳ ಕದನ, ಚೇಸಿಂಗ್ ವೇಳೆ ಕೊಹ್ಲಿ ಮಾಸ್ಟರ್ ಅನ್ನೋದು ಸಾಬೀತಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಬೇಗನೆ ಲಯ ಕಂಡುಕೊಂಡಿರುವುದು ಟೀಂ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ.
ಪಾಕಿಸ್ತಾನ ತಂಡವನ್ನು 241 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಚೇಸಿಂಗ್ ಇಳಿದಿತ್ತು. ರೋಹಿತ್ ಶರ್ಮಾ ಹಾಗೂ ಶುಬಮನ್ ಗಿಲ್ ಉತ್ತಮ ಆರಂಭ ನೀಡಿದರು. ಸಿಕ್ಸರ್ ಮೂಲಕ ನಾಯಕ ರೋಹಿತ್ ಶರ್ಮಾ ಅಬ್ಬರಿಸಿದ್ದರು. ಆದರೆ ರೋಹಿತ್ 20 ರನ್ ಸಿಡಿಸಿ ನಿರ್ಗಮಿಸಿದರು. ಗಿಲ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟ ಪಾಕಿಸ್ತಾನದ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿತು. ಗಿಲ್ 46 ರನ್ ಸಿಡಿಸಿ ಔಟಾದರು.
ಇತ್ತ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಭಾರತದ ಗೆಲುವು ಖಚಿತಪಡಿಸಿತು. ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಶ್ರೇಯಸ್ ಅಯ್ಯರ್ ಕೂಡ ಅರ್ಧಶತಕ ಸಿಡಿಸಿದರು. ಹಾಫ್ ಸೆಂಚುರಿ ಬಳಿಕ ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಹೆಚ್ಚಿಸಿದರು. ಇದು ಭಾರತದ ಗೆಲುವಿನ ವೇಗವನ್ನು ಹೆಚ್ಚಿಸಿತು.
ಶ್ರೇಯಸ್ ಅಯ್ಯರ್ 56 ರನ್ ಸಿಡಿಸಿ ಔಟಾದರು. ಇತ್ತ ಹಾರ್ದಿಕ್ ಪಾಂಡ್ಯ 8 ರನ್ ಸಿಡಿಸಿ ಔಟಾದರು. ಅಭಿಮಾನಿಗಳ ಹರ್ಷದ್ಘಾರ ಹೆಚ್ಚಾಗಿತ್ತು. ಕೇವಲ ಗೆಲುವು ಮಾತ್ರವಲ್ಲ, ಕೊಹ್ಲಿ ಸೆಂಚುರಿಗಾಗಿ ಅಭಿಮಾನಿಗಳು ಪ್ರಾರ್ಥಿಸಿತು. ಎರಡೂ ಆಸೆಗಳೂ ಈಡೇರಿತ್ತು. ಬೌಂಡರಿ ಸಿಡಿಸುವ ಮೂಲಕ ಭಾರತ ಗೆಲುವಿನ ದಡ ಸೇರಿದರೆ ಇತ್ತ ಕೊಹ್ಲಿ ಶತಕ ಪೂರೈಸಿದರು. ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಭಾರತ ಸೆಮಿಫೈನಲ್ ಸ್ಥಾನ ಖಚಿತಪಡಿಸಿತು. ಇತ್ತ ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ಪಯಣ ಬಹುತೇಕ ಅಂತ್ಯಗೊಂಡಿದೆ.