ಕಂಪ್ಲಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಪತ್ನಿಗೆ ಕೊಂದು ನೇಣಿಗೆ ಶರಣಾದ ಪತಿ
ಕಂಪ್ಲಿ: ಹೊನ್ನಳ್ಳಿ ಗ್ರಾಮದಲ್ಲಿ ವೈಯಕ್ತಿಕ ಕಲಹದ ಪರಿಣಾಮ ಪತಿ ಪತ್ನಿಯನ್ನು ಕೊಂದು, ತಾನೂ ನೇಣಿಗೆ ಶರಣಾದ ದಾರುಣ ಘಟನೆ ನಡೆದಿದೆ. ಈ ಘಟನೆಯಲ್ಲಿ ಹಲಿಮಾ (42) ಮತ್ತು ಖರೀಂ ಸಾಬ್ (45) ಸಾವನ್ನಪ್ಪಿರುವ ದಂಪತಿಯಾಗಿದ್ದಾರೆ.
ಸ್ಥಳೀಯ ಮಾಹಿತಿ ಪ್ರಕಾರ, ದಂಪತಿ ನಡುವೆ ವೈಯಕ್ತಿಕ ವಿಷಯಗಳನ್ನು ಕುರಿತಂತೆ ಆಗಾಗ ತಕರಾರು ನಡೆಯುತ್ತಿತ್ತು. ಬುಧವಾರ ತಡರಾತ್ರಿ ಅವರ ನಡುವೆ ಮತ್ತೆ ಗಲಾಟೆ ನಡೆದಿದ್ದು, ಗುರುವಾರ ಬೆಳಿಗ್ಗೆ 6:00 ಗಂಟೆ ವೇಳೆಗೆ ಪತಿಯು ಪತ್ನಿಯನ್ನು ಮನೆಯಲ್ಲಿ ನೇಣು ಹಾಕಿ ಕೊಂದ ನಂತರ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕುಡುತಿನಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.