Kampli : ಕಂಪ್ಲಿಯಲ್ಲಿ ಈದ್‌ ಸಂಭ್ರಮ : ಖರೀದಿ ಭರಾಟೆ


ಈದ್‌ ಸಂಭ್ರಮ :  ಖರೀದಿ ಭರಾಟೆ

ಕಂಪ್ಲಿ : ರಂಜಾನ್‌ ಮಾಸದ ಉಪವಾಸ ವ್ರತಾಚರಣೆ ಕೊನೆಗೊಳ್ಳಲು ಇನ್ನೇರಡು ದಿನಗಳು ಬಾಕಿ ಉಳಿದಿದ್ದು, ಈದ್‌–ಉಲ್‌–ಫಿತ್ರ ಸಂಭ್ರಮ ಎಲ್ಲೆಡೆ ಈಗಲೇ ಮನೆ ಮಾಡಿದೆ.

ಅದರಲ್ಲೂ ನಗರದ ಮೇನ್ ಬಜಾರ್ ನಲ್ಲಿ ಈಗ ನಿತ್ಯವೂ ಖರೀದಿ ಭರಾಟೆ, ಜಾತ್ರೆಯ ವಾತಾವರಣ ಎಲ್ಲೆಡೆ ಕಂಡು ಬರುತ್ತಿದೆ. ನಗರದ ನಡಲು ಮುಚ್ಚಿ ದಿಂದ ಹಿಡಿದು ಪೇಟೆ ಬಸವೇಶ್ವರ ರಸ್ತೆಯ ಅನೇಕ ಬಟ್ಟೆ ಅಂಗಡಿಗಳಲ್ಲಿ ಹಾಗೂ ಮಾರಮ್ಮ ಗುಡಿಯ ಹತ್ತಿರ ಇರುವ ಬಟ್ಟೆ ಅಂಗಡಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಅಧಿಕವಾಗಿದೆ. 

ಈ ಭಾಗದಲ್ಲಿರುವ ಬಟ್ಟೆ, ದಿನಸಿ, ಖರ್ಜೂರ, ಅಲಂಕಾರಿಕ ವಸ್ತುಗಳು, ಸಿದ್ಧಉಡುಪು, ಸೀರೆ, ಬಳೆ ಹಾಗೂ ವೃತ್ತಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ. 

ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ತಡರಾತ್ರಿ ವರೆಗೆ ಮುಸ್ಲಿಮರು ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಉಪವಾಸ ವ್ರತಾಚರಣೆ, ಬಿಸಿಲು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹಗಲಿನಲ್ಲಿ ಖರೀದಿಗೆ ಹೆಚ್ಚಿನವರು ಹೊರಗೆ ಹೋಗುತ್ತಿಲ್ಲ. ತಡರಾತ್ರಿ ತನಕ ಮಾರಾಟ ಹಾಗೂ ಖರೀದಿಗೆ  ಮಾಡುತ್ತಿದ್ದಾರೆ. ಇದರಿಂದಾಗಿ ಸಂಜೆ ತಂಪಾದ ವಾತಾವರಣದಲ್ಲಿ ಜನ ಕುಟುಂಬ ಸದಸ್ಯರೊಡನೆ ಹೊರಗಡೆ ಬಂದು ಅವರಿಗೆ ಅಗತ್ಯವಿರುವ ವಸ್ತುಗಳನ್ನು ತಡರಾತ್ರಿ ವರೆಗೆ ಓಡಾಡಿ ಖರೀದಿಸುತ್ತಿದ್ದಾರೆ.

ರಸ್ತೆಯುದ್ದಕ್ಕೂ ದ್ರಾಕ್ಷಿ, ಕಲ್ಲಂಗಡಿ, ದಾಳಿಂಬೆ, ಸೀಬೆಹಣ್ಣು, ಕಿತ್ತಳೆ, ಖರ್ಜೂರ, ಶಾವಿಗೆ, ಮದರಂಗಿ, ಗೋಡಂಬಿ, ಬಾದಾಮಿ, ಸುಗಂಧ ದ್ರವ್ಯ, ಸಿದ್ಧ ಉಡುಪುಗಳು, ಚಪ್ಪಲಿ, ಶೂ, ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಸ್ಥಳೀಯರು ಸೇರಿದಂತೆ ಹೊರಗಿನ ವ್ಯಾಪಾರಿಗಳು ಸಹ ರಸ್ತೆಯ ಬದಿಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಂಜೆಯಾದ ನಂತರ ಎಲ್ಲರಿಗೂ ಬಿಡುವಿಲ್ಲದ ಕೆಲಸ. ಕೈತುಂಬ ಹಣ ಗಳಿಸಲು ಇದೇ ಅವಕಾಶ ಎಂದು ಕೆಲವರು ಈ ಹಿಂದೆಯೇ ದಾಸ್ತಾನು ತರಿಸಿಕೊಂಡು, ಈಗ ಮಾರಾಟಕ್ಕೆ ಮುಂದಾಗಿದ್ದಾರೆ.

ಈದ್‌–ಉಲ್‌–ಫಿತ್ರ ಹಬ್ಬಕ್ಕೆ ಬಗೆಬಗೆಯ ಬಟ್ಟೆ, ಅಲಂಕಾರಿಕ ವಸ್ತುಗಳು ಬಂದಿರುವುದರಿಂದ ಮುಸ್ಲಿಂರು ಮಾರುಕಟ್ಟೆಗೆ ಹೋಗಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಜನದಟ್ಟಣೆ ಹೆಚ್ಚಾಗಿದೆ. ಹಬ್ಬಕ್ಕೆ ತೆರೆದುಕೊಂಡಿರುವ ಮಾರುಕಟ್ಟೆ ಸೌಹಾರ್ದವೂ ಮೂಡಿಸುತ್ತಿದೆ.

ಖರೀದಿಗಷ್ಟೇ ಸೀಮಿತವಾಗಿಲ್ಲ. ರಂಜಾನ್‌ ಮಾಸಕ್ಕೆಂದೆ ವಿಶೇಷವಾಗಿ ತಯಾರಿಸಲಾಗುವ ಹಲಿಮಾ, ದಹಿ ವಡೆ, ಸಮೋಸಾ ಕೂಡ ಜನ ಸವಿಯುತ್ತಿದ್ದಾರೆ. ಮಿರ್ಚಿ, ಚೂಡಾ, ಚಿಕ್‌ನ್‌ ಬಿರಿಯಾನಿ, ಮಟನ್‌ ಬಿರಿಯಾನಿ, ಕಬಾಬ್‌ ಸೇರಿದಂತೆ ಅನೇಕ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಲಸ್ಸಿ, ಇರಾನಿ ಚಹಾಕ್ಕೂ ಹೆಚ್ಚಿನ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಇರಾನಿ ಚಹಾ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. 

‘ಯಾವುದೇ ಹಬ್ಬವಿರಲಿ ಆ ನಿರ್ದಿಷ್ಟ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಆದರೆ, ಇತರೆ ಧರ್ಮೀಯರು ಮಾರುಕಟ್ಟೆಗೆ ಬಂದು ಅವರಿಗಿಷ್ಟವಾದ ವಸ್ತುಗಳನ್ನು ಖರೀದಿಸುತ್ತಾರೆ. ಪ್ರತಿ ವರ್ಷ ನಡವಲ ಮಸೀದಿ ಮುಖ್ಯರಸ್ತೆಯಲ್ಲಿ  ಹಬ್ಬ ಕಳೆಗಟ್ಟಿದೆ. ಇನ್ನೆನು ಹಬ್ಬಕ್ಕೆ ಎರಡು ದಿನಗಳು ಉಳಿದಿವೆ.  ಪ್ರತಿ ವರ್ಷದಂತೆ ಈ ವರ್ಷವೂ ಕೈತುಂಬ ಹಣ ಗಳಿಸಿದ್ದೇನೆ. ಇಂತಹ ಹಬ್ಬಗಳಿಂದ ನಮ್ಮಂತವರಿಗೆ ಸ್ವಲ್ಪ ಹಣ ಗಳಿಸಲು ಅವಕಾಶ ಇದ್ದಂತೆ’ ಎಂದು ವ್ಯಾಪಾರಿ  ರೋಷನ್ ಫ್ಯಾಷನ್ ನ ರೋಷನ್ ಪ್ರತಿಕ್ರಿಯಿಸಿದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">